

ಬಳ್ಳಾರಿ : ಜಿಲ್ಲೆಯ ತೋರಣಗಲ್‌ನ ಕಾಣಿಗನಹಳ್ಳದಿಂದ ದರೋಜಿ ಕೆರೆ ಸೇರುತ್ತಿರುವ ರಾಸಾಯನಿಕ ನೀರಿನ ಕಾರಣ ಕೆರೆಯ ನೀರು ಮಲಿನಗೊಂಡು ಜಲಚರಗಳು ಸಾಯುತ್ತಿವೆ. ತಕ್ಷಣವೇ ಈ ನೀರನ್ನು ತಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪ ಮಾಡಿದರು ಬಳಿಕ ಉತ್ತರಿಸಿದ ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಜಿಂದಾಲ್ ಕಂಪನಿಯು ರಾಸಯನಿಕ ಮಿಶ್ರಿತ (ಕೆಮಿಕಲ್ ಮಿಶ್ರಿತ) ನೀರನ್ನು ಸಂಸ್ಕರಿಸದೇ ಕಾಣಿಗನ ಹಳ್ಳದ ಮೂಲಕ ದರೋಜಿ ಕೆರೆಗೆ ಬಿಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಲು ನೋಟೀಸ್ ಜಾರಿ ಮಾಡಿದ್ದು, ತಕ್ಷಣವೇ ಕ್ರಮಕೈಗೊಳ್ಳಲು ಆದೇಶ ನೀಡಲಾಗಿತ್ತು. ನೋಟೀಸ್‌ಗೆ ಸ್ಪಂದಿಸಿರುವ ಜಿಂದಾಲ್ ಕಂಪನಿಯು 9000 ಕ್ಯೂಬಿಕ್ ಮೀ. ಪ್ರಮಾಣದ ನೀರು ಸಂಸ್ಕ್ರರಣಾ ಘಟಕವನ್ನು ಅಳವಡಿಸಿಕೊಂಡಿದೆ. ಅಲ್ಲದೇ, ರಾಸಯನಿಕಯುಕ್ತ ನೀರನ್ನು ಕಾಣಿಗಹಳ್ಳದ ಮೂಲಕ ಹರಿಸದಂತೆ ಅಗತ್ಯ ಕ್ರಮ ಕೈಗೊಂಡಿದೆ. ದರೋಜಿ ಕೆರೆ ಮತ್ತು ಕಾಣಿಗನಹಳ್ಳದಲ್ಲಿ ಹರಿಯುವ ನೀರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.