

ಹನೂರು: ತಾಲೂಕಿನ ಕೌದಳ್ಳಿ-ಕುರಟ್ಟಿ ಹೊಸೂರು ಮಾರ್ಗಮಧ್ಯೆ ಬುಧವಾರ ಬೈಕ್‌ನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ತಾಲೂಕಿನ ಶೆಟ್ಟಳ್ಳಿ ಗ್ರಾಮದ ಮುತ್ತು (56)ಬಂಧಿತ. ಇದೇ ಗ್ರಾಮದ ಗಿರೀಶ್ ಎಂಬಾತನೇ ಪರಾರಿಯಾದ ಆರೋಪಿ. ಈ ಇಬ್ಬರು ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಬೆಳಗ್ಗೆ ಬೈಕ್‌ನಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ವನ್ಯಜೀವಿ ವಲಯ ಅರಣ್ಯಾಧಿಕಾರಿ ಪಿ.ಈ ಪ್ರವೀಣ್ ಹಾಗೂ ಸಿಬ್ಬಂದಿ ಕುರಟ್ಟಿ ಹೊಸೂರು ಮಾರ್ಗದಲ್ಲಿ ದಾಳಿ ನಡೆಸಿದಾಗ ಮುತ್ತು ಸಿಕ್ಕಿ ಬಿದ್ದಿದ್ದು, ಗಿರೀಶ್ ಎಂಬಾತ ಪರಾರಿಯಾದ್ದಾನೆ. ಬಳಿಕ ಮಾಂಸ, ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮುತ್ತುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕರಾದ ರಕ್ಷಿತ್, ಕಲ್ಮೇಶ್ ತುರಮುರಿ ಹಾಗೂ ವೀರೇಶ್ ಭಾಗವಹಿಸಿದ್ದರು.