ಜಿಂಕೆ ಮಾಂಸ ಮಾರಾಟ ಆರೋಪಿಗಳ ಬಂಧನ

Published on

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ಮುತ್ತಿನಕೊಪ್ಪದ ಸಯ್ಯದ್ ಮನ್ಸೂರ್, ಅಜತ್, ಗಿರೀಶ್ ಬಂಧಿತ ಆರೋಪಿಗಳು. ಬುಧವಾರ ರಾತ್ರಿ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕುಸುಬೂರು ಗ್ರಾಮದ ದೊಡ್ಡಿನತಲೆ ಮೇಲ್ಭಾಗದ ಆರಂಬಳ್ಳಿ ಅರಣ್ಯಕ್ಕೆ ಹೋಗಿ ನೋಡಿದಾಗ ಐದು ಆರೋಪಿಗಳು ಜಿಂಕೆ ಮಾಂಸ ಬೇಯಿಸುತ್ತಿರುವುದು ಕಂಡು ಬಂದಿದೆ. ಅರಣ್ಯಾಧಿಕಾರಿಗಳ ತಂಡ ಆರೋಪಿಗಳನ್ನು ಹಿಡಿಯಲು ಹೋದಾಗ ಮಹಮ್ಮದ್ ಆರೀಫ್, ಸಯ್ಯದ್ ಎಂಬುವರು ತಪ್ಪಿಸಿಕೊಂಡರು. ಎಲ್ಲ ಆರೋಪಿಗಳು ಮುತ್ತಿನಕೊಪ್ಪ ಪ್ರದೇಶದವರು. ಬೇಟೆಗೆ ಬಳಸಿದ್ದ ನಾಡ ಬಂದೂಕು ಹಾಗೂ ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಮೂವರೂ ಆರೋಪಿಗಳನ್ನು ಗುರುವಾರ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತು ಅರಣ್ಯ ಪಾಲಕರಾದ ಬಲರಾಮೇಗೌಡ, ಪ್ರವೀಣ್ಕುಮಾರ್, ರಾಘವೇಂದ್ರ ಹಾಗೂ ವಾಹನ ಚಾಲಕ ಸುದೀಪ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net