ಜಿ.ಮಾದೇಗೌಡರ ನೆನಪು ಅಜರಾಮರ

16KMD-2
ಹನುಮಂತನಗರದ ಚಿರಶಾಂತಿ ವನದಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಸ್ಮಾರಕ.
Published on

ಕೆ.ಎಂ.ದೊಡ್ಡಿ: ಹುಟ್ಟು ಹೋರಾಟಗಾರ, ಜಿಲ್ಲೆಯ ಗಟ್ಟಿಧ್ವನಿಯಾಗಿ, ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಆಳುವ ಸರ್ಕಾರಗಳನ್ನು ಬೆಂಡೆತ್ತಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತಿದ್ದ ರೈತ ನಾಯಕ, ಹಿರಿಯ ಗಾಂಧಿವಾದಿ, ಮಾಜಿ ಸಂಸದ ಜಿ. ಮಾದೇಗೌಡರು ಅಗಲಿ 2 ವರ್ಷ ಕಳೆದಿದ್ದರೂ ಅವರ ನೆನಪು ಅಜರಾಮರವಾಗಿದೆ.

ಈ ನೆಲದ ಹೋರಾಟಗಾರ ನಮ್ಮೊಡನೆ ಇಲ್ಲದಿದ್ದರೂ ಅವರ ಅಸಂಖ್ಯಾತ ಅಭಿಮಾನಿಗಳು, ಜಿ.ಮಾದೇಗೌಡರ ಹೆಜ್ಜೆ ಗುರುತನ್ನು ಅಜರಾಮರವಾಗಿಸಲು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

ಜಿ.ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆಯ ಮಜಲುಗಳು ಹತ್ತು ಹಲವು. ರೈತ ಕುಟುಂಬದಲ್ಲಿ ಹುಟ್ಟಿದ ಗೌಡರು, ಅನ್ನದಾತರ ಕಷ್ಟ-ಸುಖಗಳನ್ನು ಅರಿತವರು. ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ರೈತರ ಜೀವನದಿ ಕಾವೇರಿ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿ ಕಾವೇರಿ ವರಪುತ್ರ ಎನಿಸಿಕೊಂಡಿದ್ದರು. ಜಿಲ್ಲೆಯ ರೈತರ ಹಿತರಕ್ಷಣೆಗಾಗಿ ಕಾವೇರಿ ಹಿತರಕ್ಷಣಾ ಸಮಿತಿ ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದರು.

ಕಾವೇರಿ ನೀರಿನ ಹಕ್ಕಿನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌಡರು, ಮಂಡ್ಯ ಜಿಲ್ಲೆಯ ರೈತರ ಪ್ರಮುಖ ಬೆಳೆಯಾದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಭಾರತೀನಗರದಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಆ ಭಾಗದ ರೈತರ ಕಣ್ಮಣಿಯಾಗಿದ್ದರು. ಹುಟ್ಟೂರು ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಗ್ರಾಮದಿಂದ ದೆಹಲಿಯ ಸಂಸತ್‌ವರೆಗೂ ಹೋರಾಟದ ಮುಖಾಂತರವೇ ರಾಜಕೀಯ ಏಳಿಗೆ ಸಾಧಿಸಿದ ಜಿ. ಮಾದೇಗೌಡರು, ಪಾಳು ಕುಗ್ರಾಮವಾಗಿದ್ದ ಕೆ.ಎಂ.ದೊಡ್ಡಿಯನ್ನು ತಮ್ಮ ಇಚ್ಛಾಶಕ್ತಿಯಿಂದಾಗಿಯೇ ಶಿಕ್ಷಣ ಕಾಶಿಯಾನ್ನಾಗಿಸಿ ಭಾರತೀನಗರವಾಗಿ ರೂಪಿಸಿದರು.

ಮತ್ತೊಂದು ಪಾಳು ಗುಡ್ಡವಾಗಿದ್ದ ಹನುಮಂತನಗರವನ್ನು ಅದ್ಭುತ ಪ್ರವಾಸಿತಾಣವಾಗಿ ನಿರ್ಮಿಸಿದ್ದಲ್ಲದೆ, ತಮ್ಮ ಅಂತಿಮ ಸಂಸ್ಕಾರವನ್ನು ಅಲ್ಲಿಯೇ ನಡೆಸುವಂತೆ ಸಾವಿಗೂ ಮುಂಚಿತವಾಗಿಯೇ ಸೂಚಿಸಿದ್ದರು. ಆ ಕಾರಣಕ್ಕಾಗಿಯೇ ಜಿ.ಮಾದೇಗೌಡರ ಅಂತ್ಯ ಸಂಸ್ಕಾರವನ್ನು ಹುಟ್ಟೂರಿನ ಬದಲು ಹನುಮಂತನಗರದಲ್ಲಿ ನಡೆಸಲಾಯಿತು.

ನೆಲದ ನಾಯಕ ಜಿ.ಮಾದೇಗೌಡರ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲೇ ಅವರ ಸ್ಮಾರಕ ನಿರ್ಮಾಣವಾಗಿದೆ. ಇದರೊಂದಿಗೆ, ಗೌಡರ ಹೋರಾಟದ ಬದುಕನ್ನು ಚಿತ್ರಪಟಗಳ ಅಳವಡಿಕೆ ಮೂಲಕ ಭವಿಷ್ಯದ ಪೀಳಿಗೆಗೆ ಅವರ ಸಾಧನೆಯನ್ನು ಮಾದರಿಯಾಗಿಸುವ ಕನಸಿನೊಂದಿಗೆ ಒಂದು ಅದ್ಬುತ ಮ್ಯೂಜಿಯಂ ಆರಂಭಿಸಲು ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಸ್ಮಾರಕ ನಿರ್ಮಾಣವಾಗಿರುವ ಹನುಮಂತನಗರದಲ್ಲಿ ಜು. 17ರಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳಿಂದ ಅದ್ದೂರಿಯಾಗಿ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಲಿದೆ.

ಮಾಜಿ ಸಂಸದ ಜಿ.ಮಾದೇಗೌಡರು ತಮ್ಮ ಪುತ್ರ ಮಧು ಜಿ.ಮಾದೇಗೌಡ ಅವರನ್ನು ಶಾಸಕರನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದರು. ಆದರೆ ಮಧು ಜಿ.ಮಾದೇಗೌಡರ ಗೆಲುವು ನೋಡುವ ಮೊದಲೇ ವಿಧಿವಶರಾಗಿದ್ದು ನೋವಿನ ಸಂಗತಿ ಎಂಬುದು ಗೌಡರ ಅಸಂಖ್ಯಾತ ಅಭಿಮಾನಿಗಳ ಅನಿಸಿಕೆ.

ಜಿ.ಮಾದೇಗೌಡ ಒಬ್ಬ ವ್ಯಕ್ತಿಯಾಗಿರದೆ, ಒಂದು ಶಕ್ತಿಯಾಗಿದ್ದರು. ಮಂಡ್ಯದಲ್ಲಿ ಹೋರಾಟ ಎಂದರೆ ಸಾಕು ಇಳಿ ವಯಸ್ಸಿನಲ್ಲೂ ಊರುಗೋಲು ಹಿಡಿದು ಪ್ರತಿಭಟನೆಗೆ ಸಜ್ಜಾಗುತ್ತ ಎಂತಹವರನ್ನಾದರೂ ತಮ್ಮ ಮಾತಿನ ಧಾಟಿಯಲ್ಲಿ ನಡುಗುಸುತಿದ್ದ ವ್ಯಕ್ತಿತ್ವವುಳ್ಳವರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net