

ಮೈಸೂರು: ದೇಶದಲ್ಲಿ ಆಯೋಜಿಸುತ್ತಿರುವ ಜಿ-20 ಸಮಾವೇಶದ ಭಾಗವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ನಗರದಲ್ಲಿ ಭಾನುವಾರ ‘ಶಾಂತಿಗಾಗಿ ನಡಿಗೆ’ ಆಯೋಜಿಸಲಾಗಿತ್ತು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಟಿ.ಕೆ.ಲೇಔಟ್ (ಸರಸ್ವತಿಪುರಂ) ಶಾಖೆಯಿಂದ ಆಯೋಜಿಸಿದ್ದ ನಡಿಗೆ ಕಾರ್ಯಕ್ರಮ ಕುಕ್ಕರಹಳ್ಳಿ ಕೆರೆ ಅಂಗಳದಿಂದ ಆರಂಭಗೊಂಡು ಸುತ್ತಮುತ್ತಲ ರಸ್ತೆಯಲ್ಲಿ 5 ಕಿ.ಮೀ.ಗೂ ಹೆಚ್ಚು ದೂರ ಸಾಗಿತು.
ಆರೋಗ್ಯ, ಸಾಮಾಜಿಕ ಒಳಗೊಳ್ಳುವಿಕೆ, ಸ್ವಾಸ್ಥ್ಯ, ಶಾಂತಿ ಮತ್ತು ದೈಹಿಕ ಸಾಮರ್ಥ್ಯ ಕುರಿತು ಜಾಗೃತಿಗಾಗಿ ಆಯೋಜಿಸಿದ್ದ ಜಾಥಾದಲ್ಲಿ ವಿವಿಧ ಕಾಲೇಜುಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪಿ.ಎನ್.ಗಣೇಶ್‌ಕುಮಾರ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಕ್ಯಾಪ್ಟನ್ ಇಂದ್ರಾಣಿ, ಬ್ರಹ್ಮಕುಮಾರಿ ಬಿ.ಕೆ.ಮಂಜುಳಾ ಇತರರು ಇದ್ದರು.
ವಿದ್ಯಾವರ್ದಕ ಇಂಜಿನಿಯರಿಂಗ್ ಕಾಲೇಜು, ವಿದ್ಯಾವಿಕಾಸ್ ಇಂಜಿನಿಯರಿಂಗ್ ಕಾಲೇಜು, ಸೋಮಾನಿ ಬಿ.ಇಡಿ ಕಾಲೇಜು, ಎಸ್‌ಬಿಬಿಆರ್ ಮಹಾಜನ, ಕುವೆಂಪುನಗರ ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜು, ಕ್ರೈಸ್ಟ್ ಕಾಲೇಜು, ಜೆಎಸ್‌ಎಸ್ ಮಹಿಳಾ ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್, ಜಿಎಸ್‌ಎಸ್ ಐಇಟಿ, ಎಸ್‌ವಿಇಐ ಪಬ್ಲಿಕ್ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆ, ಸಂಘ-ಸಂಸ್ಥೆಗಳ ಸದಸ್ಯರು, 30ಕ್ಕೂ ಹೆಚ್ಚು ಬ್ರಹ್ಮಕುಮಾರಿ ಸ್ವಯಂ ಸೇವಕರು ಭಾಗವಹಿಸಿದ್ದರು.