

ಹಾಸನ: ಜಾವಗಲ್‌ನಿಂದ ಬೇಲೂರಿಗೆ ಬಸ್ಸಿನಲ್ಲಿ ಬರುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗಿನಲ್ಲಿದ್ದ ಅಂದಾಜು 4,90,000 ರೂ. ಮೌಲ್ಯದ ಚಿನ್ನಾಭರಣವನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದ ಚೈತ್ರಾ ಅವರು ಸಂಬಂಧಿಕರ ಮನೆಯ ಗೃಹ ಪ್ರವೇಶಕ್ಕೆಂದು ಶನಿವಾರ ಬೇಲೂರಿಗೆ ಆಗಮಿಸುತ್ತಿದ್ದರು. ಬಿದರೆ ಗ್ರಾಮದಿಂದ ಜಾವಗಲ್‌ಗೆ ಬಂದು ಅಲ್ಲಿಂದ ಬೇಲೂರಿಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಇಡಲಾಗಿದ್ದ ಅಂದಾಜು 4,90,000 ರೂ. ಮೌಲ್ಯದ 62 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ್ದಾರೆ. ಕಳುವಾದ ಚಿನ್ನದ ಒಡವೆಗಳನ್ನು ಹುಡುಕಿಕೊಡಬೇಕೆಂದು ಚೈತ್ರಾ ಅವರು ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.