

ಚಿಂತಾಮಣಿ: ಕೆರೆಗಳ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದೆ ಕೆ.ಸಿ.ವ್ಯಾಲಿ ನೀರು ಹರಿಸಿದ ಅಧಿಕಾರಿಗಳ ವಿರುದ್ಧ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಗುರುವಾರ ಹರಿಹಾಯ್ದರು.
ಕುರುಟಹಳ್ಳಿ ಬಳಿ ಅಳವಡಿಸಿರುವ ಜಾಕ್‌ವೆಲ್ ಪೈಪ್‌ನಿಂದ ನೀರು ಹೊರಬರುವುದನ್ನು ವೀಕ್ಷಿಸಿದ ನಂತರ ಕುರುಟಹಳ್ಳಿ ಕೆರೆಯಲ್ಲಿ ಜಾಲಿ ಮರಗಳು ಬೆಳೆದಿರುವುದನ್ನು ನೋಡಿ ಎಇ ಕೃಷ್ಣಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.
ಕೆರೆಯಲ್ಲಿ ಬೆಳೆದಿರುವ ಜಾಲಿ ಮರಗಳನ್ನು ಕಟಾವು ಮಾಡದೆ ನೀರು ಬಿಟ್ಟಿದ್ದಾರೆ. ಜತೆಗೆ ಇಜ್ಚಲು ಮಾಡುವವರು ಕೆರೆ ಪಕ್ಕದಲ್ಲಿ ವಾಸಿಸುತ್ತಿದ್ದಾರೆ, ಇದನ್ನೆಲ ನೋಡಿಕೊಂಡು ಕೆರೆಗೆ ನೀರು ಬಿಡಬೇಕಾಗಿತ್ತು, ಆದರೆ ಇದ್ಯಾವುದನ್ನೂ ನೋಡದೇ ನೀರು ಬಿಟ್ಟಿದ್ದಾರೆ. ಮುಖ್ಯ ಇಂಜನಿಯರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ, ನೀರು ನಿಲ್ಲಿಸಿ ಕೆರೆಯಲ್ಲಿರುವ ಮರಗಳನ್ನು ತೆರವು ಮಾಡಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
ಕೆ.ಸಿ.ವ್ಯಾಲಿಯಲ್ಲಿ 126 ಕೆರೆಗಳು ಸೇರಿದ್ದು ಅದರಲ್ಲಿ ನಮ್ಮ ತಾಲೂಕಿನಲ್ಲಿ 5 ಕೆರೆಗಳು ಸೇರಿವೆ. ಎರಡನೇ ಹಂತದಲ್ಲಿ 47 ಕೆರೆಗಳನ್ನು ಡಿಪಿಅರ್ ಮಾಡಿ ಕೆರೆಗಳನ್ನು ತುಂಬಿಸಲಾಗುತ್ತದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಂ.ಎನ್.ವೆಂಕಟರೆಡ್ಡಿ, ಜಿಪಂ ಮಾಜಿ ಸದಸ್ಯ ಗುಡೇ ಶ್ರೀನಿವಾಸರೆಡ್ಡಿ, ಮುಖಂಡರಾದ ಸೀಕಲ್ ಶ್ರೀನಿವಾಸಗೌಡ, ಕುರುಬೂರು ಮಲ್ಲಿಕಾರ್ಜುನಗೌಡ ಇತರರಿದ್ದರು.