

ಸಾಗರ: ಇಲ್ಲಿನ ನೆಹರು ನಗರದ ಮನೆಯಿಂದ ನಾಪತ್ತೆಯಾದ ಬೆಕ್ಕು ಸಾಮಾಜಿಕ ಜಾಲತಾಣದಿಂದಾಗಿ ಮನೆಗೆ ಮರಳಿದೆ.
ಮನೆಗಳಲ್ಲಿ ನಾಯಿ ಸಾಕುವ ವಾಡಿಕೆ ಇದೆ. ಬೆಕ್ಕನ್ನು ಅಪಶಕುನ ಸೂಚಕ ಎಂದರೂ ಕೆಲವರು ಪ್ರೀತಿಗಾಗಿ ಸಾಕುತ್ತಾರೆ. ಇನ್ನೂ ಕೆಲವರು ಮನೆಯಲ್ಲಿರುವ ಇಲಿಯನ್ನು ಕಾಟ ತಡೆಯಲು ಇಟ್ಟುಕೊಳ್ಳುತ್ತಾರೆ. ಆದರೆ ಇಲ್ಲಿನ ನೆಹರು ನಗರದ ಸಮೀರ್ ದುಬಾರಿ ಬೆಲೆಯ ಪರ್ಷಿಯನ್ ಜಾತಿಯ ಆಕರ್ಷಕ ಬಿಳಿಯ ಬೆಕ್ಕೊಂದನ್ನು ಸಾಕಿದ್ದು ಮಂಗಳವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕಾಣೆ ಆಗಿತ್ತು. ಬೆಕ್ಕು ಮನೆಯಿಂದ ಕಾಣೆಯಾಗಿದ್ದಕ್ಕೆ ಮನೆಮಂದಿ ಕಂಗಾಲಾಗಿದ್ದು, ಕೊನೆಗೆ ಅದರ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿ ಬೆಕ್ಕು ತಂದುಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಕೂಡ ಘೋಷಿಸಲಾಗಿತ್ತು. ಬೆಕ್ಕಿನ ಭಾವಚಿತ್ರವನ್ನು ನೋಡಿದ ಜನತೆ ನಮಗೆ ಇದು ಸಿಕ್ಕರೆ ವಾಪಸ್ ಕೊಡುವುದು ಬೇಡ ಎನ್ನುವ ಮಟ್ಟಿಗೆ ಅದು ಮುದ್ದಾಗಿತ್ತು.
ಮನೆಯವರೆಲ್ಲ ಎಲ್ಲ ಕಡೆಗಳಲ್ಲಿ ಹುಡುಕಿದರೂ ಬೆಕ್ಕು ಸಿಗಲಿಲ್ಲ. ಆದರೆ ಬೆಕ್ಕಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇತ್ತು. ಸಾಗರದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಶಂಶುದ್ದೀನ್ ಎನ್ನುವ ಯುವಕ ರಸ್ತೆಯಲ್ಲಿ ಸಾಗುತ್ತಿದ್ದ ಬೆಕ್ಕನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಬೆಕ್ಕು ಇಲ್ಲಿಯೇ ಓಡಾಡುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅದನ್ನು ಹಿಡಿದು ಮಾಲೀಕನಿಗೆ ಕರೆ ಮಾಡಿ ಸಮೀರ್‌ಗೆ ಒಪ್ಪಿಸಿದ್ದಾನೆ.
ಸಮೀರ್ ಬಹುಮಾನ (ಹಣ) ನೀಡಲು ಮುಂದಾದಾಗ ಶಂಶುದ್ದೀನ್ ನಯವಾಗಿ ತಿರಸ್ಕರಿಸಿ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಮಾಡುವ ಸಹಕಾರ ಅಷ್ಟೇ ನಾನು ಮಾಡಿದ್ದೇನೆ ಎಂದು ತೆರಳಿದನು. ಅಂತೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆಕ್ಕು ಮಂಗಳವಾರ ತಡರಾತ್ರಿ ಮಾಲೀಕನ ಮನೆ ಸೇರಿತು.