

ಮೈಸೂರು: ಫೇಸ್‌ಬುಕ್‌ನಲ್ಲಿ ಬಿತ್ತರವಾದ ಜಾಹೀರಾತು ನಂಬಿ ಮೋಸ ಹೋಗಿರುವ ಹೆಬ್ಬಾಳು ನಿವಾಸಿಯೊಬ್ಬರು 13.15 ಲಕ್ಷ ರೂ. ಕಳೆದುಕೊಂಡಿದ್ದಾರೆ.
20 ವರ್ಷಗಳ ಸೇವಾ ಹಿನ್ನೆಲೆಯ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ವಂಚಕರು ಬಲೆ ಬೀಸಿದ್ದಾರೆ. ನಕಲಿ ಜಾಹಿರಾತು ವೀಕ್ಷಿಸಿ, ಹೂಡಿಕೆ ಬಗ್ಗೆ ವಿಚಾರಿಸಿದ ಕೂಡಲೇ ಈ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆ ಮಾಡಿ, ನಂತರ ಖೆಡ್ಡಾ ತೋಡಿದ್ದಾರೆ.
ಹೂಡಿಕೆಯಿಂದ ದೊಡ್ಡ ಮಟ್ಟದ ಲಾಭ ಪಡೆಯಬಹುದೆಂಬ ಆಮಿಷ ನಂಬಿದ ವ್ಯಕ್ತಿ, ಹಂತ ಹಂತವಾಗಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ.
ನಂತರ ಅಧಿಕ ಲಾಭಾಂಶ ಬಂದಿದೆ ಎಂದು ತೋರಿಸಿ, ಮತ್ತಷ್ಟು ಹಣ ದೋಚಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಈ ವ್ಯಕ್ತಿ, ಲಾಭಾಂಶದ ಹಣವನ್ನು ವಿತ್ ಡ್ರಾ ಮಾಡಲು ಮುಂದಾದಾಗಲೂ ಹಣ ಪಾವತಿಗೆ ಬೇಡಿಕೆ ಇಟ್ಟಿದ್ದಾರೆ.
ಇದರಿಂದ ಮೋಸ ಹೋಗಿರುವುದು ಅರಿವಾಗಿದೆ. ಇವರು ನೀಡಿದ ದೂರಿನ ಅನ್ವಯ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.