ಜಾರ್ಖಂಡ್ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ

Jain Protest Photo-1
Published on

ಬೀದರ್: ಜಾರ್ಖಂಡ್‍ನ ಗಿರಿಡಿ ಜಿಲ್ಲೆಯ ಜೈನ ಸಮುದಾಯದ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವಾಗಿ ಘೋಷಿಸಿದ ಅಲ್ಲಿಯ ಸರ್ಕಾರದ ಕ್ರಮವನ್ನು ವಿರೋಧಿಸಿ ಜೈನರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀ ಚಂದ್ರಪ್ರಭ ದಿಗಂಬರ ಜೈನ ಕಲ್ಯಾಣ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮುಂದಾಳತ್ವದಲ್ಲಿ ನಗರದ ಕ್ರಾಂತಿ ಗಣೇಶ ಸಮೀಪದ ಜೈನ ಮಂದಿರದಿಂದ ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಬೀದರ್ ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಜಾರ್ಖಂಡ್ ಸರ್ಕಾರದ ಕ್ರಮದಿಂದ ಸಮ್ಮೇದ ಶಿಖರ್ಜಿ ಬೆಟ್ಟದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ದೂರಿದರು.
ಸಮ್ಮೇದ ಶಿಖರ್ಜಿ ಬೆಟ್ಟದಲ್ಲಿ ಜೈನರ 24 ತೀರ್ಥಂಕರರ ಪೈಕಿ 20 ಮಂದಿ ಮೋಕ್ಷ ಹೊಂದಿದ್ದಾರೆ. ಹೀಗಾಗಿ ಸರ್ಕಾರ ಈ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡದೆ, ‘ಆರಾಧನೆ ಸ್ಥಳ' ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್ ಅಧ್ಯಕ್ಷ ನರಶಿವರಾಜ ಟಿಕ್ಕೆ, ಉಪಾಧ್ಯಕ್ಷ ರವಿಕಾಂತ ಬೆಳಕೇರಿ, ಕಾರ್ಯದರ್ಶಿ ಪ್ರಮೋದ್ ವನಕುದರೆ, ಜಂಟಿ ಕಾರ್ಯದರ್ಶಿ ಅನಿಲಕುಮಾರ ಬೆಳಕೇರಿ, ಖಜಾಂಚಿ ಜೈನ ವಿ. ಪಾಶ್ರ್ವನಾಥ, ಟ್ರಸ್ಟಿಗಳಾದ ರಾಜಕುಮಾರ ಲೋಖಂಡೆ, ಸುನೀಲಕುಮಾರ ಟೊಂಗೆ, ಪ್ರಶಾಂತ ಟಿಕ್ಕೆ, ಸಂತೋಷ ವನಕುದರೆ, ವಿಜಯಕುಮಾರ ವನಕುದರೆ, ಸುಜೀತಕುಮಾರ ಚಿಂಡೆ, ಅಶೋಕ ವನಕುದರೆ, ಸುಭಾಷ್ ಬೋಗಾರ್, ಅಶೋಕ ಬೋಗಾರ್, ಸುಭಾಷ್ ಮೆಹತಾ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net