

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಗ್ರಾಮದಲ್ಲಿ ಅನರ್ಹರಿಗೆ ಹಂಚಿಕೆಯಾಗಿರುವ ಆಶ್ರಯ ನಿವೇಶನಗಳನ್ನು ರದ್ದುಪಡಿಸುವಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾನೂನು ಬಾಹಿರವಾಗಿ ಆಯ್ಕೆಯಾಗಿ ನಿವೇಶನ ಹಂಚಿಕೆಯಾದ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸುವ ಕುರಿತು ವರ್ಷದ ಹಿಂದೆಯೇ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರು ಧಾರವಾಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಅದರಂತೆ ಹುಬ್ಬಳ್ಳಿ ತಹಸೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದ್ದರು. ತನಿಖಾ ತಂಡ ರಚನೆ ಮಾಡಿ ತನಿಖೆ ಕೂಡ ಮಾಡಿದ್ದರು. ತನಿಖಾ ತಂಡದ ವರದಿ ಪ್ರಕಾರ ಅನರ್ಹ ಫಲಾನುಭವಿಗಳ ಪಟ್ಟಿ ರದ್ದುಪಡಿಸಲು ಸೂಚಿಸಲಾಗಿತ್ತು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಿದ ಜಿಲ್ಲಾಡಳಿತವು ಪ್ರಸ್ತಾಪಿತ ಜಮೀನುಗಳು ಖಾಸಗಿಯವರಿಂದ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ತಹಸೀಲ್ದಾರ್ ಮುಖಾಂತರ ಖರೀದಿಸಲಾಗಿದೆ. ನಂತರದಲ್ಲಿ ತಾಲೂಕು ಪಂಚಾಯಿತಿಯವರಿಗೆ ವರ್ಗಾಯಿಸಲಾದ ಜಮೀನು ಇದಾಗಿದೆ. ತಾಲೂಕು ಪಂಚಾಯಿತಿ ವತಿಯಿಂದ ಹಕ್ಕು ಪತ್ರ ನೀಡಲಾಗಿದ್ದು, ಎಲ್ಲ ಜಮೀನುಗಳ ಹಕ್ಕು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಹಾಗಾಗಿ ಹಕ್ಕು ಪತ್ರ ರದ್ದುಪಡಿಸುವುದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಈ ವಿಷಯದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಜಿಪಂ ಸಿಇಒ ಅವರಿಗೆ 13-7-2021ರಂದು ಪತ್ರ ಬರೆದಿದ್ದಾರೆ.
ಪತ್ರ ಬರೆದು ತಿಂಗಳಾದರೂ ಜಿಪಂನಿಂದ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಆಶ್ರಯ ಯೋಜನೆಯಿಂದಾಗಿ ಸಾವಿರಾರು ಜನರು ನಿವೇಶನ ಇಲ್ಲದೇ ಕುಳಿತಿದ್ದಾರೆ. ಅವರಿಗೆ ಆಸರೆ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕೈಗೊಳ್ಳಬೇಕೆಂದು ರೇವಡಿಹಾಳ ಗ್ರಾಮದ ಹಿರಿಯರಾದ ಗುರುಪಾದಯ್ಯ ಮುಪ್ಪಯ್ಯನವರ ಆಗ್ರಹಿಸಿದ್ದಾರೆ.
ಜಿಲ್ಲೆಯ ಹಿರಿಯ ಅಧಿಕಾರಿಗಳು ವರ್ಷದಿಂದ ಕೇವಲ ಪತ್ರ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಕ್ರಮ ಜರುಗಿಸುತ್ತಿಲ್ಲ. ಇನ್ನಾದರೂ ಜಿಪಂ ಸಿಇಒ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಅನರ್ಹ ಫಲಾನುಭವಿಗಳ ಪಟ್ಟಿ ರದ್ದುಪಡಿಸಿ, ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆರೂವರೆ ಎಕರೆ ಜಮೀನು
ದೇವರಗುಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇವಡಿಹಾಳ ಗ್ರಾಮದ ಸರ್ವೆ ನಂ. 24, 73 ಹಾಗೂ 84/1ರ ಕ್ಷೇತ್ರ 6
ಎಕರೆ 20 ಗುಂಟೆ ಜಮೀನಿನಲ್ಲಿ 1997-98ನೇ ಸಾಲಿನಲ್ಲಿ ವಸತಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬುದು ಗ್ರಾಮಸ್ಥರ ದೂರು.
ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಪಂ ವ್ಯಾಪ್ತಿಯ ರೇವಡಿಹಾಳ ಗ್ರಾಮದಲ್ಲಿ ವಸತಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆಯಾಗಿ ನಿವೇಶನ ಹಂಚಿಕೆಯಾದ ಫಲಾನುಭವಿಗಳನ್ನು ರದ್ದುಪಡಿಸುವ ಕುರಿತು ಜಿಲ್ಲಾಧಿಕಾರಿಯವರಿಂದ ಪತ್ರ ಬಂದಿತ್ತು. ಆದರೆ, ಈ ಬಗ್ಗೆ ಯಾರು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸ್ಪಷ್ಟೀಕರಣ ಕೋರಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ನಿಗಮದಿಂದ ಸ್ಪಷ್ಟೀಕರಣ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.| ದೀಪಕ ಮಡಿವಾಳರ ಸಿಪಿಒ, ಜಿಪಂ ಧಾರವಾಡ