

ಚಿತ್ರದುರ್ಗ
ಜಾನುವಾರುಗಳ ಗಣತಿ ನಿಖರವಾಗಿದ್ದರೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸುಲಭವಾಗಲಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಜಾನುವಾರು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ‌್ಯಕ್ರಮದಲ್ಲಿ 21 ನೇ ಜಾನುವಾರು ಗಣತಿ ಸೂಚನಾ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದು ಗಣತಿ, ದೇಶದ ಕಾರ‌್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಹಾಯವಾಗುತ್ತದೆ. ಹಾಗಾಗಿ ಗಣತಿ ನಿಷ್ಪಕ್ಷಪಾತ,ನಿರ್ದಿಷ್ಟ ವಾಗಿದ್ದರೆ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಈಗ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರ ಬದುಕಿಗೆ ಜಾನುವಾ ರುಗಳು ಆಸರೆಯಾಗಿವೆ. ಕೃಷಿ ಪ್ರಧಾನ ದೇಶದಲ್ಲಿ ಜಾನುವಾರುಗಳಿಗೆ ಪ್ರಾಮುಖ್ಯತೆ ಇದೆ.
ಕಂದಾಯ ಹಾಗೂ ಪಶುಪಾಲನಾ ಇಲಾಖೆ ಒಂದಕ್ಕೊಂದು ಪೂರಕ. ಅಮೃತ ಮಹಲ್ ಕಾವಲು ಒತ್ತುವರಿ ನಿಯಂತ್ರಿಸಬೇಕಿದೆ. ಸೆ.1ರಿಂದ ಡಿಸೆಂಬರ್‌ವರೆಗೆ ಜಾನುವಾರು ಗಣತಿ ನಡೆಯಲಿದೆ. ಒಂದು ಮನೆಯನ್ನೂ ಬಿಡದೆ ಜಾನುವಾರುಗಳ ಗಣತಿ ಮಾಡಬೇಕು. ಪಶುಸಂಗೋಪನೆ ರೈತರ ಜೀವನಕ್ಕೆ ಅವಿಭಾಜ್ಯಅಂಗವಾಗಿರುವುದರಿಂದ ಗೊಂದಲಕ್ಕೆ ಆಸ್ಪದ ಕೊಡದಂತೆ ಗಣತಿ ಮಾಡ ಬೇಕಿದೆ ಎಂದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಎನ್.ಕುಮಾರ್ ಮಾತನಾಡಿ,1919ರಲ್ಲಿ ಜಾನುವಾರು ಗಣತಿ ಆರಂಭಗೊಂಡಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಜಾನುವಾರು ಗಣತಿ ನಡೆಯಲಿದೆ. ಇದನ್ನಾಧರಿಸಿ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ. ಪ್ರತಿ ಮನೆಗೆ ಭೇ ಟಿ ನೀಡಿ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಬೇಕೆಂದರು.
ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎಸ್.ಎನ್.ಹರೀಶ್,ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಂಕಿ ಅಂಶಗಳ ಸಹಾಯಕ ನಿರ್ದೇಶಕಿ ನೂರ್‌ಜಾನ್ ಇತರರು ಇದ್ದರು.
(ಸಿಟಿಡಿ 27 ಜಾನುವಾರು ಗಣತಿ)
ಚಿತ್ರದುರ್ಗದಲ್ಲಿ ಮಂಗಳವಾರ 21ನೇ ಜಾನುವಾರು ಗಣತಿ ತರಬೇತಿ ಕಾರ್ಯಕ್ರಮದಲ್ಲಿ ಗಣತಿ ಸೂಚನಾ ಕೈಪಿಡಿಯನ್ನು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು. ನೂರ್‌ಜಾನ್,ಡಾ.ಎನ್.ಕುಮಾರ್,ಡಾ.ಎಸ್.ಎನ್.ಹರೀಶ್,ಡಾ.ತಿಪ್ಪೇಸ್ವಾಮಿ ಇತರರು ಇದ್ದರು.
--