

ಚಿತ್ರದುರ್ಗ: ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡದಂತೆ ತಡೆಯಲು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ರೈತರಲ್ಲಿ ಮನವಿ ಮಾಡಿದರು.
ಚಿತ್ರದುರ್ಗ ತಾಲೂಕು ವಿಜಾಪುರದಲ್ಲಿ ಗುರುವಾರ, 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ‌್ಯಕ್ರ ಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಲುಬಾಯಿ ರೋಗ ಒಂದು ರಾಸಿನಿಂದ ಇನ್ನೊಂದಕ್ಕೆ ರಾಸುವಿಗೆ ಅತೀ ಬೇಗ ಹರಡುತ್ತದೆ. ಗಾಳಿ ಮೂಲಕವೂ ತುಂಬಾ ದೂರದವರೆಗೂ ರೋಗ ಹರಡುತ್ತದೆ ಎಂದರು.
ಸಾರ್ವಜನಿಕರು ಅತಿ ಜಾಗರೂಕರಾಗಿರಬೇಕು. ರೋಗ ಲಕ್ಷಣ ಕಂಡುಬಂದ ರಾಸುಗಳನ್ನು ತಕ್ಷಣ ಬೇರ್ಪಡಿಸಬೇಕು. ರೋಗ ಪೀಡಿತ ಪ್ರದೇಶಗಳಿಂದ ಪಶು ಆಹಾರ ಖರೀದಿಸಬಾರದು. ರೋಗದಿಂದ ಅಸು ನೀಗಿದ ಜಾನುವಾರನ್ನು ಆಳದ ಗುಂಡಿಯಲ್ಲಿ ಮುಚ್ಚಬೇಕು. ನ.20ರವರೆಗೆ ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯ ಎಲ್ಲ ರೈತರು ರಾಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿ ಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ವಿಜಾಪುರ ಮತ್ತು ಓಬವ್ವನಾಗತಿಹಳ್ಳಿಯಲ್ಲಿ ಲಸಿಕೆ ಕಾರ‌್ಯಕ್ರಮದ ಪ್ರಗತಿ ಹಾಗೂ ಸಿರಿಗೆರೆ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಲಸಿಕೆ ದಾಸ್ತಾನು, ಶೀತಲೀಕರಣ ನಿರ್ವಹಣೆಯನ್ನು ಪರಿಶೀಲಿಸಿದರು. ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಸದಸ್ಯ ಶಿವಚಂದ್ರನಾಯಕ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಎನ್. ಕುಮಾರ್, ಸಹಾಯಕ ನಿರ್ದೇಶಕಿ ಡಾ.ಜಿ.ಇಂದಿರಾಬಾಯಿ,ಪಶು ವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ, ವಿಸ್ತರಣಾಧಿಕಾರಿ ಡಾ.ಮುರುಗೇಶ್, ಪಶುವೈದ್ಯಕೀಯ ಪರೀಕ್ಷಕ ಬಸವರಾಜ್ ಇದ್ದರು.