

ಕಲಘಟಗಿ: ಸರ್ಕಾರದ ನಿರ್ದೇಶನದನ್ವಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ವಿಶಿಷ್ಟ ಗುರುತಿನ ಸಂಖ್ಯೆಯ ಕಿವಿಯೋಲೆ ಅಳವಡಿಸುವ ಕಾರ್ಯ ತಾಲೂಕಿನಾದ್ಯಂತ ಪ್ರಗತಿಯಲ್ಲಿದೆ. ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಿವಿಯೋಲೆ ಹಾಕಿಸಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಸಂತಿ ಹೇಳಿದರು.
ಮಂಗಳವಾರ ಮನೆ-ಮನೆಗೆ ತೆರಳಿ ಜಾನುವಾರುಗಳಿಗೆ ಉಚಿತವಾಗಿ ಕಿವಿಯೋಲೆ ಅಳವಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲು ಬಾಯಿ ರೋಗ ನಿಮೂಲನೆ ಮಾಡುವ ಉದ್ದೇಶದಿಂದ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಮುಂಬರುವ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಲಸಿಕೆ ಹಾಕುವ ಮುನ್ನ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಕಿವಿಯೋಲೆ ಅಳವಡಿಸಬೇಕೆಂದು ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿದೆ. ಕಿವಿಯೋಲೆ ಇಲ್ಲದ ಜಾನುವಾರಿಗೆ ಲಸಿಕೆ ಇಲ್ಲ. ಆದ್ದರಿಂದ ಮೇ 14ರಿಂದ ತಾಲೂಕಿನಾದ್ಯಂತ ಉಚಿತವಾಗಿ ಕಿವಿಯೋಲೆ ಅಳವಡಿಸುವ ಕಾರ್ಯವನ್ನು ಕೈಗೊಂಡಿದ್ದು, ಇಲಾಖೆ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಭಾಗದ ರೈತರು, ಚುನಾಯಿತ ಪ್ರತಿನಿಧಿಗಳು, ಊರ ಮುಖಂಡರು ಸಹಕರಿಸಬೇಕು ಎಂದರು.
ಕಿವಿಯೋಲೆ ಕಡ್ಡಾಯ: ಕಿವಿಯೋಲೆ ಕೇವಲ ಗುರುತಿನ ಸಂಖ್ಯೆ. ಕಿವಿಯೋಲೆ ಇದ್ದಲ್ಲಿ ಅದು ವಿಮೆಗೆ ಒಳಪಟ್ಟಿದೆ ಅಥವಾ ಬ್ಯಾಂಕ್ ಸಾಲದೊಂದಿಗೆ ಖರೀದಿಸಲಾಗಿದೆ ಎಂಬುದು ತಪ್ಪು. ಬಹಳಷ್ಟು ಜನ ಅದರಲ್ಲೂ ದಲ್ಲಾಳಿಗಳು ಇದನ್ನು ತಪ್ಪಾಗಿ ಗ್ರಹಿಸಿ ಮಾರಾಟಕ್ಕೆ ಕೊಂಡು ಹೋಗುವ ಮುನ್ನ ಕಿವಿಯೋಲೆ ಕತ್ತರಿಸಿ ತೆಗೆದು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಜಾನುವಾರುಗಳಲ್ಲಿನ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಅಧಿನಿಯಮ 2009 ಕಲಂ 32ರ ಪ್ರಕಾರ ಕಿವಿಯೋಲೆ ಹಾಕಿದ್ದನ್ನು ತೆಗೆಯುವುದು ಹಾಗೂ ಹಾಕುವಾಗ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.