

ಕೊಡೇಕಲ್: ಕಾಲುಬಾಯಿ ರೋಗ ಬಾರದಂತೆ ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಹುಣಸಗಿ ತಾಲೂಕು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಮಹಬೂಬ್ ಸಾಹೇಬ್ ಖಾಜಿ ಹೇಳಿದರು.
ಕುರೇಕನಾಳ ಗ್ರಾಮದಲ್ಲಿ ಶುಕ್ರವಾರ ಪಶು ಸಂಗೋಪನಾ ಇಲಾಖೆಯಿಂದ ಹಮ್ಮಿಕೊಂಡ 6ನೇ ಸುತ್ತಿನ ರಾಷ್ಟಿçÃಯ ಕಾಲುಬಾಯಿ ಬೇನೆ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಮನೆಯಲ್ಲಿರುವ ಎತ್ತು, ಆಕಳು ಮತ್ತು ಎಮ್ಮೆಗಳಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ ಹೀಗಾಗಿ ಮುಂಜಾಗ್ರತವಾಗಿ ಪ್ರತಿಯೊಬ್ಬರೂ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ವರ್ಷದಲ್ಲಿ ಎರಡು ಬಾರಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ಮನೆ ಮನೆಗೆ ಬಂದು ಲಸಿಕೆ ಹಾಕಲಾಗುತ್ತದೆ ರೈತರು ಕಡ್ಡಾಯವಾಗಿ ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಈ ಅಭಿಯಾನ ನ.20ವರೆಗೆ ನಡೆಯಲಿದೆ. ಹುಣಸಗಿ ತಾಲೂಕಿನಲ್ಲಿ ಒಟ್ಟು 10 ತಂಡ ರಚಿಸಲಾಗಿದ್ದು ಪ್ರತಿಯೊಂದು ಗ್ರಾಮಗಳಿಗೆ ತಂಡದ ಸದಸ್ಯರು ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಹೇಳಿದರು.
ಕೊಡೇಕಲ್ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚೈತ್ರಾ, ಪಶು ಅಧಿಕಾರಿಗಳಾದ ಮಹ್ಮದ್‌ಸಾಬ್ ಚೌದ್ರಿ, ನಿಂಗಪ್ಪ ವಡ್ಡೊಡಗಿ, ಸಿಬ್ಬಂದಿ ಪ್ರಕಾಶ, ವಿಜಯಲಕ್ಷ್ಮೀ, ರಮೇಶ, ಸಮೀರ, ರೈತರಾದ ಬಸನಗೌಡ ಪಾಟೀಲ್, ಶಾಂತಗೌಡ, ಜೆಟ್ಟೆಪ್ಪ ಇತರರಿದ್ದರು.