ಜಾನುವಾರುಗಳಲ್ಲಿ ಕಾಲುಬಾಯಿ ರೋಗ, ಬನ್ನೇರುಘಟ್ಟದ ಹಕ್ಕಿಪಿಕ್ಕಿ ಕಾಲನಿ ನಿವಾಸಿಗಳು ತತ್ತರ ಹೈನೋದ್ಯಮ ನಂಬಿದವರಿಗೆ ಸಂಕಷ್ಟ

IMG-20210521-WA0091
Published on

ನವೀನ್‌ಚಂದ್ರ ಶೆಟ್ಟಿ ಆನೇಕಲ್

ಬನ್ನೇರುಘಟ್ಟ ಕಾಡಂಚಿನ ಹಕ್ಕಿಪಿಕ್ಕಿ ಕಾಲನಿಯ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕಾಲನಿ ಜನರಲ್ಲಿ 30ಕ್ಕೂ ಹೆಚ್ಚು ಜನರು ಕರೊನಾ ಸೋಂಕಿಗೆ ತುತ್ತಾಗಿರುವ ನಡುವೆಯೇ ಹೈನುಗಾರಿಕೆಯನ್ನೇ ನಂಬಿರುವ ಇವರ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡು ವಾರದಿಂದ 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ಪ್ರಾರಂಭದಲ್ಲಿ ರೋಗ ಕಾಣಿಸಿಕೊಂಡಿರುವ ಹಸುಗಳು ಮೇವು ತಿನ್ನುವುದನ್ನು ನಿಲ್ಲಿಸುತ್ತವೆ. ಗೊರಸು ಕೊಳೆಯಲಾರಂಭಿಸುತ್ತದೆ. ಬಾಯಿ, ಕೆಚ್ಚಲಿನ ಮೇಲೆ ನೀರು ಗುಳ್ಳೆಗಳು ಏಳುತ್ತವೆ. ಪರಿಣಾಮ ಬಾಯಿಯಿಂದ ಜೊಲ್ಲು ಸೋರುವಿಕೆ ಮತ್ತು ಕುಂಟುವಿಕೆ ಆರಂಭವಾಗುತ್ತದೆ. ಆಹಾರ ತಿನ್ನಲು ತೊಂದರೆ ಅನುಭವಿಸುತ್ತವೆ. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವನ್ನಪ್ಪುತ್ತವೆ. ರೋಗ ಲಕ್ಷಣ ಕಂಡ ಜಾನುವಾರುಗಳನ್ನು ಪ್ರತ್ಯೇಕಿಸದಿದ್ದರೆ ಮತ್ತಷ್ಟು ಜಾನುವಾರುಗಳಿಗೂ ರೋಗ ಹರಡುತ್ತದೆ.

ಬನ್ನೇರುಘಟ್ಟಕ್ಕೂ ಹಬ್ಬುವ ಭೀತಿ: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಸ್ಯಾಹಾರಿ ಸಾರಿ ಹಕ್ಕಿಪಿಕ್ಕಿ ಕಾಲನಿಗೆ ಹೊಂದಿಕೊಂಡಂತೆ ಇದೆ. ಹಕ್ಕಿಪಿಕ್ಕಿ ಗ್ರಾಮಸ್ಥರು ಜಾನುವಾರುಗಳನ್ನು ಮೇಯಿಸಲು ಬನ್ನೇರುಘಟ್ಟ ಅರಣ್ಯದ ಆಸುಪಾಸಿನಲ್ಲಿ ಬಿಡುತ್ತಾರೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳಲ್ಲದೆ, ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಗಳಿಗೂ ಕಾಲು ಬಾಯಿ ಸಾಂಕ್ರಾಮಿಕ ಹಬ್ಬುವ ಭೀತಿ ಉಂಟಾಗಿದೆ. ಒಂದು ವೇಳೆ ಅಲ್ಲಿರುವ ಪ್ರಾಣಿಗಳಿಗೆ ರೋಗ ಹಬ್ಬಿದರೆ, ವನ್ಯಜೀವಿಗಳು ಬಲಿಯಾಗುವ ಭೀತಿ ಇದೆ. ಈ ಹಿಂದೆ ಕೂಡ ಹಕ್ಕಿಪಿಕ್ಕಿ ಕಾಲನಿಯಲ್ಲಿ ಕಾಲು ಬಾಯಿ ರೋಗ ಕಂಡುಬಂದಾಗ ಜೈವಿಕ ಉದ್ಯಾನದ ಹಲವು ಪ್ರಾಣಿಗಳು ಏಕಾಏಕಿ ಸತ್ತಿದ್ದವು. ಹಾಗಾಗಿ, ಪಶುವೈದ್ಯರು ಕೂಡಲೇ ಕಾಲು ಬಾಯಿ ಸಾಂಕ್ರಾಮಿಕ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಈಗಾಗಲೇ ಕಾಲು ಬಾಯಿ ರೋಗದಿಂದ ಹಲವು ಜಾನುವಾರುಗಳು ಸತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಜಯರಾಮ್, ಸ್ಥಳೀಯ ನಿವಾಸಿ ಹಕ್ಕಿಪಿಕ್ಕಿ ಕಾಲನಿಯಲ್ಲಿ ಇರುವ ಬಹುತೇಕ ಜನರು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಕರೊನಾ ಆತಂಕ ಇದೆ. ಇದರ ಜತೆಗೆ ಕಾಲು ಬಾಯಿ ರೋಗದ ಭೀತಿಯೂ ಕಾಡಲಾರಂಭಿಸಿದೆ. ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಗೆ ಸ್ಪಂದಿಸಬೇಕು. ರವಿ, ಸ್ಥಳೀಯ ನಿವಾಸಿ ಮೂರು ದಿನಗಳಿಂದ ಹಕ್ಕಿಪಿಕ್ಕಿ ಕಾಲನಿಯಲ್ಲಿ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ತಗುಲಿರುವ ಹಸುವನ್ನು ಪ್ರತ್ಯೇಕಿಸಿ ರೋಗ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೊಟ್ಟಿಗೆ ಸುತ್ತ ಸಿಂಪಡಿಸಲು ರಾಸಾಯನಿಕ ದ್ರಾವಣ ನೀಡಿದ್ದೇವೆ. ಎಂ.ಆರ್.ರವಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ, ಆನೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net