

ಚನ್ನರಾಯಪಟ್ಟಣ : ಚರ್ಮ ಗಂಟು ರೋಗದ ಹರಡುವಿಕೆ ತಪ್ಪಿಸುವ ಸಲುವಾಗಿ ಹಾಸನ ಹಾಲು ಒಕ್ಕೂಟದ ವತಿಯಿಂದ 1 ಲಕ್ಷ ವ್ಯಾಕ್ಸಿನ್(ಲಸಿಕೆ) ಖರೀದಿಸಿ ಜಾನುವಾರುಗಳಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಶೆಟ್ಟಿಹಳ್ಳಿ ಬಳಿಯಿರುವ ನಂದಿನಿ ಹಾಲಿನ ಶೀಥಲೀಕರಣ ಘಟಕದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮೇವು ಕಟಾವು ಯಂತ್ರ ಮತ್ತು ರಬ್ಬರ್ ನೆಲ ಹಾಸುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೈನೋದ್ಯಮದಲ್ಲಿ ತೊಡಗಿರುವ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಕೆಎಂಎಫ್ ವತಿಯಿಂದ ಪ್ರತಿವರ್ಷ ಕೋಟ್ಯಂತರ ಮೌಲ್ಯದ ಯಂತ್ರೋಪಕರಣ ಹಾಗೂ ಇತರೆ ಪರಿಕರಗಳನ್ನು ಸಹಾಯ ಧನದಡಿ ಒದಗಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡು ಬಂದಿದೆಯಾದರೂ ರೋಗದ ತ್ರೀವತೆ ಕುಗ್ಗಿಸುವ ನಿಟ್ಟಿನಲ್ಲಿ ಕೆಎಂಎಫ್ ವತಿಯಿಂದ ತಜ್ಞ ವೈದ್ಯರನ್ನು ಬಳಸಿಕೊಂಡು ರೈತರನ್ನು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಶುಪಾಲನಾ ಇಲಾಖೆಗಳ ಮೂಲಕವೂ ಲಸಿಕೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡುವುದರ ಜತೆಗೆ ರೋಗದಿಂದ ಮೃತಪಡುವ ರಾಸುಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
30 ಸಾವಿರ ರೂ. ಮೌಲ್ಯದ ಮೇವು ಕಟಾವು ಯಂತ್ರವನ್ನು 15 ಸಾವಿರ ರೂ. ಸಬ್ಸಿಡಿಯೊಂದಿಗೆ 200 ಮಂದಿ ರೈತರಿಗೆ ಹಾಗೂ 1390 ರೂ. ಸಬ್ಸಿಡಿಯೊಂದಿಗೆ 6500 ರಬ್ಬರ್ ಮ್ಯಾಟ್‌ಗಳನ್ನು ಒಟ್ಟಾರೆ 1.2 ಕೋಟಿ ರೂ. ಸಹಾಯ ಧನದೊಂದಿಗೆ ವಿತರಿಸಲಾಗುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್.ಮಂಜುನಾಥ್, ಹಾಸನ ಕೆಎಂಎಫ್‌ನ ಉಪ ವ್ಯವಸ್ಥಾಪಕ ಡಾ.ಪ್ರಸನ್ನ, ಶೀಥಲೀಕರಣ ಕೇಂದ್ರದ ವ್ಯವಸ್ಥಾಪಕ ವಿಜಯೇಂದ್ರ, ಉಪ ವ್ಯವಸ್ಥಾಪಕರಾದ ದಯಾನಂದ್, ಸಿ.ಸಿ.ಯೋಗೇಶ್, ವಿಸ್ತರಣಾಧಿಕಾರಿ ಕೃಷ್ಣಮೂರ್ತಿ, ವಿದ್ಯಾ ಹಾಗೂ ಇತರರು ಇದ್ದರು.