ಜಾನುವಾರು ಸಂತೆ ದಿನ ಬದಲು

CTD APMC KURI MARUKATTE---------------
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಕುರಿ, ಮೇಕೆ ಹಾಗೂ ದನ ಮತ್ತಿತರ ಜಾನುವಾರಗಳ ಮಾರುಕಟ್ಟೆ ದಿನಗಳನ್ನು ಬದಲಿಸಲು ನಗರದ ಎಪಿಎಂಸಿ ನಿರ್ಧರಿಸಿದ್ದು, ಜೂ. 30ರ ನಂತರ ಪ್ರತಿ ಸೋಮವಾರದ ದನಗಳ ಮಾರುಕಟ್ಟೆಯನ್ನು ಶನಿವಾರ, ಗುರುವಾರದ ಕುರಿ, ಮೇಕೆ ಮಾರುಕಟ್ಟೆಯನ್ನು ಭಾನುವಾರ ನಡೆಸುವುದಾಗಿ ಸಮಿತಿ ಹೇಳಿದೆ.

ದನ, ಎಮ್ಮೆ ಮಾರುಕಟ್ಟೆ ಸೋಮವಾರ ಬೆಳಗಿನ ಜಾವ ನಾಲ್ಕೈದು ಗಂಟೆಗೆ ಆರಂಭವಾದರೆ, ಗುರುವಾರ ಕುರಿ, ಮೇಕೆ ಮಾರುಕಟ್ಟೆ ಬೆಳಗಿನಜಾವ 2-3 ಗಂಟೆಯಿಂದಲೇ ಆರಂಭವಾಗುತ್ತದೆ. ಬೆಳಗ್ಗೆ 10-11ಗಂಟೆಯೊಳಗೆ ಈ ಎರಡೂ ಮಾರುಕಟ್ಟೆಗಳ ವಹಿವಾಟು ಬಹುತೇಕ ಪೂರ್ಣಗೊಳ್ಳುತ್ತವೆ.

ಚಿತ್ರದುರ್ಗದ ಕುರಿ ಮಾರುಕಟ್ಟೆ ಉಸ್ತುವಾರಿಯನ್ನು ರಾಜ್ಯಸರ್ಕಾರ 2019 ರಿಂದ ಚಿತ್ರದುರ್ಗದ ದೇವರಾಜ ಅರಸ್ ಕುರಿ ಸಾಕಾ ಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ವಹಿಸಿದೆ. ಪ್ರತಿ ಕುರಿ/ಮೇಕೆ ಮಾರಾಟವಾದರೆ, ಖರೀದಿದಾರರಿಂದ 5 ರೂ. ಸೆಸ್ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಸಂಘಕ್ಕೆ 2 ರೂ., ಎಪಿಎಂಸಿಗೆ 2 ರೂ. ಹಾಗೂ ಒಂದು ರೂ. ಸಂಘದ ಮಹಾ ಮಂಡಳಕ್ಕೆ ಹೋಗುತ್ತದೆ.

ದನಗಳಿಗೆ ಸಂಬಂಧಿಸಿದ ಸೆಸ್ 5 ರೂ. ಸಮಿತಿಗೆ ಸಂಪೂರ್ಣ ಜಮಾ ಆಗುತ್ತದೆ. ಅರ್ಧ ಎಕರೆಗಿಂತ ಕಡಿಮೆ ವಿಸ್ತೀರ್ಣದಲ್ಲಿರುವ ಈ ಮಾರುಕಟ್ಟೆಯನ್ನು ಬೇರೆಡೆ ಸ್ಥಳಾಂತರಿಸಲು ಸಮಿತಿ ಚಿಂತಿಸಿದೆ. ಆದರೆ, ಸರ್ಕಾರಿ ಜಾಗ ದೊರೆಯುತ್ತಿಲ್ಲ. ಶೌಚಗೃಹ, ಸುಸಜ್ಜಿತ ರಸ್ತೆ, ಸ್ವಚ್ಛತೆ ಸಹಿತ ಮೂಲ ಸೌಕರ್ಯಗಳ ಕೊರತೆ ಇದೆ.

ಸಿಸಿ ಕ್ಯಾಮರಾ ಅಳವಡಿಕೆಯೊಂದಿಗೆ ಸುರಕ್ಷತೆಗೂ ಒತ್ತು ಕೊಡಬೇಕಿದೆ. ಉತ್ತಮ ರಸ್ತೆ ಇಲ್ಲದೆ ಕುರಿ, ಜಾನುವಾರು ಸಾಗಿಸುವ ವಾಹನ ಗಳು ಆತಂಕದಲ್ಲೇ ಸಂಚರಿಸುವಂತಾಗಿದೆ. ಮಾರುಕಟ್ಟೆ ದಿನಗಳನ್ನು ಬದಲಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ರಾಜ್ಯದ ಹಲವು ಜಿಲ್ಲೆಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಇತ್ಯಾದಿ ಕಡೆಗಳಿಂದ ಖರೀದಿದಾರರು ಬರುತ್ತಾರೆ. ಹಲವರು ಭಾನು ವಾರ ಬೇರೆಡೆ ಕುರಿಗಳನ್ನು ಖರೀದಿಸಿ ಗುರುವಾರ ಇಲ್ಲಿ ಮಾರಾಟ ಮಾಡುವ ಪದ್ಧತಿ ಕೂಡ ಇದೆ.

ಚಿತ್ರದುರ್ಗದಲ್ಲಿ ಗುರುವಾರ, ಹೊಸದುರ್ಗ-ಬುಧವಾರ, ಮೊಳಕಾಲ್ಮೂರು ರಾಂಪುರ- ಶನಿವಾರ ಕುರಿ ಮಾರುಕಟ್ಟೆ ಇರುತ್ತದೆ. ಆ ದ್ದರಿಂದ ಚಿತ್ರದುರ್ಗದಲ್ಲಿ ಭಾನುವಾರ ಮಾರುಕಟ್ಟೆ ನಡೆಸುವ ತನ್ನ ನಿರ್ಧಾರದಿಂದ ಸಮಿತಿ ಹಿಂದೆ ಸರಿಯಬೇಕೆಂಬ ಬೇಡಿಕೆ ಖರೀದಿದಾ ರರು ಮತ್ತು ಮಾರಾಟಗಾರದ್ದಾಗಿದೆ ಎಂದು ಸಂಘದ ಮೂಲಗಳು ತಿಳಿಸಿವೆ.

----

ಬಾಕ್ಸ್.

ಜಾರಿಯಾಗದ ಟ್ಯಾಗ್ ವ್ಯವಸ್ಥೆ

ಕುರಿಗಳನ್ನು ತೂಗಿ, ಅವುಗಳಿಗೆ ಟ್ಯಾಗ್ ಅಳವಡಿಸುವ ಸಮಿತಿಯ ಯೋೀಜನೆ ಕೈಗೂಡಿಲ್ಲ. ರೈತರು, ಮಾರಾಟಗಾರರಿಗೆ ನ್ಯಾಯಯುತ ಬೆಲೆ ಸಿಗಬೇಕೆಂಬ ಕಾರಣಕ್ಕೆ ಸಮಿತಿ ಟ್ಯಾಗ್ ಅಳವಡಿಕೆಗೆ ಮುಂದಾಗಿತ್ತು. ಪ್ರತಿ ಗುರುವಾರ ಅಂದಾಜು 4 ಸಾವಿರ ಕುರಿ- ಮೇಕೆಗಳು, ಸೋಮವಾರ ಅಂದಾಜು 500 ದನಗಳನ್ನು ಮಾರುಕಟ್ಟೆಗೆ ತರಲಾಗುತ್ತದೆ. 2024-25ನೇ ಹಣಕಾಸು ಸಾಲಿನಲ್ಲಿ 14,333 ದನಗಳ ಖರೀದಿಯಾಗಿದ್ದು 71,665 ರೂ. ಹಾಗೂ 56,966 ಕುರಿ, ಮೇಕೆಗಳು ಖರೀದಿಯಿಂದ 1,13,926 ರೂ. ಸೆಸ್ ಎಪಿಎಂಸಿಗೆ ಸಂಗ್ರಹವಾಗಿದೆ.

----

ಕೋಟ್

ಮಾರುಕಟ್ಟೆ ಸ್ಥಳಾಂತರಿಸುವ ಚಿಂತನೆ ಇದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಶೌಚಗೃಹ ನಿರ್ಮಾಣ ಸಹಿತ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು.

ಬಿ.ಎಲ್. ಕೃಷ್ಣಪ್ಪ, ಕಾರ್ಯದರ್ಶಿ, ಎಪಿಎಂ, ಚಿತ್ರದುರ್ಗ

---

ಕೋಟ್

ಮಾರುಕಟ್ಟೆಗೆ ವಿಶಾಲ ಜಾಗದ ಅಗತ್ಯವಿದೆ. ಆದರೆ, ಮಾರುಕಟ್ಟೆ ದಿನಗಳ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ. ಸಮಿತಿ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಮಾರುಕಟ್ಟೆಯಲ್ಲಿ ಅಗತ್ಯ ಮೂಲ ಸವಲತ್ತುಗಳನ್ನು ಒದಗಿಸಬೇಕು.

ಎಂ. ಜಯಪ್ರಕಾಶ್ ಯಾದವ್, ಕಾರ್ಯದರ್ಶಿ,

ಶ್ರೀ ದೇವರಾಜ ಅರಸ್ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಚಿತ್ರದುರ್ಗ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net