ಜಾನಪದವೇ ಮಾತೃ ಸಂಸ್ಕೃತಿ

18 nrp 1 web
Published on

 ಎನ್.ಆರ್.ಪುರ: ಜಾನಪದವು ವಿಶ್ವದಲ್ಲೇ ಅತಿ ಪ್ರಾಚೀನ ಸಂಸ್ಕೃತಿ. ಹಾಗಾಗಿ ಯಾವುದೇ ಕಾರಣಕ್ಕೂ ಈ ಸಂಸ್ಕೃತಿಯನ್ನು ಕಡೆಗಣಿಸಬಾರದು ಎಂದು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಬಾಲಾಜಿ ಅಭಿಪ್ರಾಯಪಟ್ಟರು. ಗುರುವಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್​ನಿಂದ ಕಜಾಪ ತಾಲೂಕು ಘಟಕವನ್ನು ರುಬ್ಬುವ ಕಲ್ಲು ತಿರುಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಐವರು ಜಾನಪದ ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆದರೆ ಗ್ರಾಮೀಣ ಭಾಗದವರು ಕೂಡ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ. ವಿದೇಶದ ಜನರು ಭಾರತೀಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ನಮ್ಮ ಸಂಪ್ರದಾಯದ ಮದುವೆ, ಹಬ್ಬ, ಸಂತೆಗಳು ಮುಂದುವರಿಯಬೇಕು ಎಂದರು. ರಾಜ್ಯದಲ್ಲಿ 257 ವಿವಿಧ ಜಾನಪದ ನೃತ್ಯ ಪ್ರಕಾರಗಳಿವೆ. 52 ಪ್ರಕಾರದ ಜಾನಪದ ಹಾಡುಗಳಿವೆ. ಹೊರರಾಜ್ಯ, ವಿದೇಶಗಳಲ್ಲೂ ನಮ್ಮ ಕನ್ನಡ ಜಾನಪದ ಹಾಡುಗಳು ಜನಪ್ರಿಯಗೊಂಡಿವೆ. ಗಾದೆಗಳು, ಜಾನಪದ ಆಟ, ಜಾನಪದದಲ್ಲಿ ವಿಜ್ಞಾನ, ಗಣಿತ ಇದೆ. ರಾಜ್ಯದ ವಿವಿಧೆಡೆ ಪರಿಷತ್​ನಿಂದ 6700 ಕಾರ್ಯಕ್ರಮ ಮಾಡಿದ್ದೇವೆ. ಕರೊನಾ ಸಮಯದಲ್ಲಿ ಆನ್​ಲೈನ್​ನಲ್ಲಿ 100ಕ್ಕೂ ಹೆಚ್ಚು ವಿಚಾರ ಸಂಕಿರಣ ಮಾಡಿದ್ದೇವೆ ಎಂದು ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ. ನಿಜಾಮುದ್ದೀನ್ ಮಾತನಾಡಿ, ಕೆಲವು ಡೋಂಗಿ ಎಡಪಂಥೀಯ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದು ಭಾರತೀಯ ಸಂಸ್ಕೃತಿಗೆ ದೊಡ್ಡ ಪೆಟ್ಟು ನೀಡಿದೆ. ಜಾಗತೀಕರಣದಿಂದ ಭಾರತೀಯ ಸಂಸ್ಕೃತಿ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದರು.

ಕನ್ನಡ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಶೆಟ್ಟಿಕೊಪ್ಪ ಎಂ.ಮಹೇಶ್ ಅವರಿಗೆ ಎತ್ತಿನ ನೊಗ ನೀಡುವ ಮೂಲಕ ಜಿಲ್ಲಾಧ್ಯಕ್ಷ ಪೂರ್ಣೆಶ್ ಅಧಿಕಾರ ಹಸ್ತಾಂತರಿಸಿದರು. ನೇರ್ಲೆಕೊಪ್ಪ ಅಂಟಿಕೆ-ಪಿಂಟಿಕೆ ಕಲಾವಿದ ಡಿ.ಜಿ.ಸತೀಶ್ ಅವರನ್ನು ಸನ್ಮಾನಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net