

ಮೈಸೂರು: ಜಾನಪದಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ನಮ್ಮ ಪೂರ್ವಿಕರು ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿದ್ದಾರೆ ಎಂದು ಜಾನಪದ ಗಾಯಕ ಗೋ.ನಾ.ಸ್ವಾಮಿ ಅಭಿಪ್ರಾಯಪಟ್ಟರು.
ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರ ಪ್ರದೇಶದಲ್ಲಿ ಹುಟ್ಟಿದವರು ಯಾಕೆ ಜಾನಪದ ಕಲಾವಿದರನ್ನು ಸೃಷ್ಟಿಸಲಿಲ್ಲ. ನಾನು ಜಾನಪದ ಗಾಯಕನಾದ್ದರಿಂದ 62 ದೇಶಕ್ಕೆ ಭೇಟಿ ನೀಡಿರುವೆ. ಒಮ್ಮೆ ಅಮೆರಿಕದಲ್ಲಿ ಕಾರ್ಯಕ್ರಮ ನೀಡುವಾಗ ಜಾನಪದ ಗಾಯಕರನ್ನು ದೂರ ನಿಲ್ಲಿಸಿದ್ದರು. ಬಳಿಕ ನಮ್ಮ ಜಾನಪದದ ಶಕ್ತಿಗೆ ಬೆರಗಾಗಿ ಬಹಳ ಗೌರವಿಸಿದರು. ಇದುವೇ ಜಾನಪದ ಕಲೆಯ ಶಕ್ತಿ ಎಂದರು
ಚಲನಚಿತ್ರಕ್ಕೆ 100 ವರ್ಷಗಳ ಇತಿಹಾಸವಿದೆ. ನಮ್ಮ ಹೆಮ್ಮೆಯ ಜಾನಪದ ಕಲೆ ಸಾವಿರಾರು ವರ್ಷಗಳಿಂದಲೂ ಇದೆ. 2000 ಇಸವಿಯ ನಂತರ ಬಂದ ಸಿನಿಮಾಗಳ ಹಾಡುಗಳನ್ನು ಕೇಳಲು ಆಗದು. ಸಿನಿಮಾ ನೋಡಲೂ ಆಗದು.
ಮದ್ಯಪಾನ ಮತ್ತು ಹುಡುಗಿ ಮೇಲೆ ಬರೆದ ಹಾಡುಗಳು ಬಹಳ ಹಿಟ್ ಆಗಿವೆ. ಈ ಹಾಡುಗಳನ್ನು ಬರೆದವರು ಸಾವಿರಾರು ಯುವಕರ ಬದುಕನ್ನು ಹಾಳು ಮಾಡಿದ್ದಾರೆ. ಕೇಸರಿ ತಿನ್ನು, ಪಾನ್ ಪರಾಗ್, ಹನ್ಸ್ ತಿನ್ನುವಂತೆ ಜಾಹೀರಾತುಗಳು ಯುವಕರ ಜೀವನವನ್ನು ಹಾಳು ಮಾಡಿವೆ ಎಂದು ಹೇಳಿದರು.
ಯಾವ ದೇಶದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಾನು ನೋಡಿಲ್ಲ. ನಮ್ಮಲ್ಲಿ ಏನೇನೋ ಜಗಿದು ಉಗಿಯುವುದು. ಇದು ಸಾರ್ವಜನಿಕ ಸಭ್ಯತೆ ಅಲ್ಲ. ಮದ್ಯಪಾನ, ಧೂಮಪಾನದಿಂದ ಕ್ಯಾನ್ಸರ್ ರೋಗ ಹೆಚ್ಚಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ನಿಮ್ಮ ಉದ್ಧಾರವನ್ನು ಯಾರು ಮಾಡುವುದಿಲ್ಲ. ನೀವೇ ನಿಮ್ಮ ಉದ್ಧಾರ ಮಾಡಿಕೊಳ್ಳಬೇಕು. ಈ ದೇಶ ನಮಗೇ ಎಲ್ಲವನ್ನೂ ಕೊಟ್ಟಿದೆ. ದೇಶದ ಮೇಲೆ ಅಭಿಮಾನ ಉಳಿಸಿಕೊಳ್ಳಬೇಕು. ನಮ್ಮಲ್ಲಿ ಇನ್ನೂ ನಂಬಿಕೆ, ಬಾಂಧವ್ಯ ಉಳಿದಿದೆ. ಕಠಿಣ ಪರಿಶ್ರಮದಿಂದ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಸುಂದರ್ ರಾಜ್, ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಆಡಳಿತಾಧಿಕಾರಿ ಪ್ರೊ.ಕೆ.ತಿಮ್ಮಯ್ಯ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಪ್ರೊ.ರಾಚಯ್ಯ ಇದ್ದರು.