

ಜಾನಪದಕ್ಕೆ ಅಧಿಕೃತ ಪಠ್ಯ ರಚಿಸುವ ಕುರಿತು ಉನ್ನತ ಅಧ್ಯಯನ ನಡೆಯಬೇಕಿದೆ ಎಂದು ಜಾನಪದ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಶಾಸ್ತ್ರೀಯ ಕನ್ನಡ: ಸಾಂಸ್ಕೃತಿಕ ಪರಿಶೋಧನೆ’ ರಾಷ್ಟ್ರೀಯ ವಿಚಾರಸಂಕಿರಣದ ಗೋಷ್ಠಿಯಲ್ಲಿ ಜಾನಪದ ಮಹಾಕಾವ್ಯ ವಿಷಯ ಕುರಿತು ಮಾತನಾಡಿದರು.
ಮಂಟೇಸ್ವಾಮಿ ಕಾಲ ಯಾವುದು, ಪ್ರಯಾಣ ಎಲ್ಲಿಂದ ಆರಂಭ ಎಂಬ ಬಗ್ಗೆ ಐತಿಹಾಸಿಕ ವಿವರಗಳ ಪತ್ತೆಯಾಗಿಲ್ಲ. ಆದರೆ ಲಕ್ಷಾಂತರ ಜನರು ಮಂಟೇಸ್ವಾಮಿ ಕಾವ್ಯ ಹಾಡುತ್ತಾರೆ. ಇದನ್ನು ಬರೆದವರು ಯಾರೆಂದು ಗೊತ್ತಿಲ್ಲ. ಇದನ್ನು ವಿಶ್ವವಿದ್ಯಾಲಯದಲ್ಲಿ ಕಲಿಸಲಾಗುವುದಿಲ್ಲ. ನಿಧಾನವಾಗಿ ಗುಂಪಿನಲ್ಲಿ ಕಲಿಯುವ ವಿದ್ಯೆ ಎಂದು ವಿವರಿಸಿದರು.
ಜಾನಪದ ಸಂಗ್ರಹ ಕಾರ್ಯದಲ್ಲಿ ಬರೆದುಕೊಳ್ಳುವುದು ಮುಖ್ಯವಾಯಿತು. ಅಲ್ಲಿ ಕೇಳುವುದಕ್ಕೆ ಪ್ರಾಮುಖ್ಯತೆ ಇಲ್ಲ. ಬರೆದಿಟ್ಟರೆ ಪ್ರಯೋಜನವೇನು? ಜಾನಪದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಷ್ಟಪಟ್ಟು ಓದುತ್ತಾರೆ. ಆದರೂ ಮೂಲ ಸ್ವಾರಸ್ಯ ಸಿಗುವುದಿಲ್ಲ. ಬರೆಯುವುದು ಓದುವುದು ಅಗ್ರಹಾರದಲ್ಲಿದ್ದರೆ, ಉಳಿದೆಡೆ ಕೇಳುವ ಪದ್ಧತಿ ಇತ್ತು. ಕೇಳುಗರಿಂದಲೇ ಮಹಾಕಾವ್ಯಗಳು ಹುಟ್ಟಿದವು ಎಂದರು.
ಮಹಿಳೆಯರು ಜಾನಪದ ಕಾವ್ಯ ಹಾಡದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕೇಳುತ್ತಾರೆ. ಜಾನಪದ ಕಾವ್ಯ ಬೀದಿ ಜ್ಞಾನ. ವಿವಿಗಳ ಜ್ಞಾನವಲ್ಲ. ಮಂಟೇಸ್ವಾಮಿ ಕಾವ್ಯದ ಆದಿಯೊಳಗಿನ ಜ್ಯೋತಿ ಪ್ರಾರ್ಥನೆ ಗೀತೆಯಲ್ಲಿ ಸಂವಿಧಾನಾತ್ಮಕ ಅಂಶಗಳಿವೆ. ಜ್ಯೋತಿಯಿಂದ ಪರಂಜ್ಯೋತಿಯಾಗಿ ಸಾರ್ವತ್ರಿಕಗೊಳ್ಳುತ್ತದೆ. ಅದೇ ಜಾನಪದ ಕಾವ್ಯ ಶ್ರೇಷ್ಠತೆ ಎಂದು ಅಭಿಪ್ರಾಯಪಟ್ಟರು.
ಸಮಾನತೆ ತತ್ವಗಳಿವೆ: ಮಾದಪ್ಪ, ಮಂಟೇಸ್ವಾಮಿ, ಜುಂಜಪ್ಪ ಕಾವ್ಯದಲ್ಲಿ ಸಮಾನತೆಯ ತತ್ವಗಳಿವೆ. ಅತ್ಯಾಧುನಿಕ ಸಂಗತಿಗಳನ್ನೂ ಕಾಣಬಹುದಾಗಿದೆ ಎಂದು ವಿವರಿಸಿದರು.
ಧರೆಗೆ ದೊಡ್ಡವರು ಮಂಟೇಸ್ವಾಮಿ ಕಾವ್ಯವನ್ನು ಜೀ.ಶಂ.ಪರಮಶಿವಯ್ಯ ಅವರು ಮಳವಳ್ಳಿ ಬಸ್ ನಿಲ್ದಾಣದಲ್ಲಿ ಹಾಡುತ್ತಿದ್ದ ಗಾಯಕನಿಂದ ಮೊದಲು ಸಂಗ್ರಹಿಸಿದರು. ಶೇ.60ರಿಂದ 70 ಭಾಗ ಪ್ರಕಟಿಸಿದರು. ತದನಂತರ ತ.ಮಂ.ಪರಶಿವಮೂರ್ತಿ, ವೆಂಕಟೇಶ ಇಂದ್ವಾಡಿ, ಡಾ.ಪಿ.ಕೆ.ರಾಜಶೇಖರ ಪಠ್ಯಗಳನ್ನು ಸಂಗ್ರಹಿಸಿದ್ದಾರೆ ಎಂದರು.
ಭಾರತದ ಹಲವು ಜಾನಪದ ಕಾವ್ಯಗಳನ್ನು ಕೇಳಿದ್ದೇನೆ. ಮಧ್ಯ ಕರ್ನಾಟಕದ ಕಥನ ಕಾವ್ಯಗಳನ್ನೂ ಕೇಳಿದ್ದೇನೆ. ಮಂಟೇಸ್ವಾಮಿ ಕಾವ್ಯ ಅತ್ಯಂತ ಸುಶ್ರಾವ್ಯವಾದದ್ದು. ಎಷ್ಟು ಸಲ ಕೇಳಿದರೂ ಹೊಸತು ಅನಿಸುತ್ತದೆ ಎಂದು ಹೇಳಿದರು.
ಜಾನಪದ ಮಹಾಕಾವ್ಯಗಳಲ್ಲಿ ಇತಿಹಾಸ, ದಂತಕತೆ, ಸಾಹಿತ್ಯ ಮೂರು ಸೇರಿಕೊಂಡಿದೆ. ಇದನ್ನು ಬಿಡಿಸುವ ಸವಾಲು ವಿದ್ವಾಂಸರಿಗೆ ಇದೆ ಎಂದರು.