ಜಾನಪದ ಸಾಹಿತ್ಯದಲ್ಲಿದೆ ಮಾನವೀಯ ಮೌಲ್ಯ

kdr pooja
ಕಡೂರಿನಲ್ಲಿ ಜಾನಪದ ಪರಿಷತ್‌ನಿಂದ ನಡೆದ ಸಂಕ್ರಾಂತಿ ಸಂಭ್ರಮ ಮತ್ತು ರಂಗೋಲಿ ಸ್ಪರ್ಧೆಯನ್ನು ಕಜಾಪ ಅಧ್ಯಕ್ಷ ಡಾ. ಬಾಲಾಜಿ ಉದ್ಘಾಟಿಸಿದರು. ಎಂ.ಎಸ್.ವಿಶಾಲಾಕ್ಷಮ್ಮ, ಸವಿತಾ, ಶೋಭಾ, ಕೌಜಲಗಿ, ಪುಷ್ಪಾ ಇತರರಿದ್ದರು.
Published on

ಕಡೂರು: ಜಾನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಅಡಗಿವೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಬಾಲಾಜಿ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ಜಾನಪದ ಪರಿಷತ್ ಮಹಿಳಾ ಘಟಕದಿಂದ ನಡೆದ ವಿಶ್ವ ಜಾನಪದ ಕನ್ನಡ ರಾಜ್ಯೋತ್ಸವ ಬುಡಕಟ್ಟು ದಿನಾಚರಣೆ ಹಾಗೂ ಜಾನಪದ ಸಂಕ್ರಾಂತಿ ಸಂಭ್ರಮ ಹಾಗೂ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕೃಷಿ ಸಂಸ್ಕೃತಿ ಮೂಲವಾದ ಜಾನಪದವನ್ನು ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.

ಜಾನಪದ ಸಾಹಿತ್ಯದಲ್ಲಿ ಬದುಕಿನ ಸಾರಾಂಶ ಅಳವಡಿಸಿರುವ ಪೂರ್ವಿಕರು ಇಂದಿಗೂ ಗಟ್ಟಿಬೇರಾಗಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಾನಪದ ಕಲೆ ಉಳಿಸಲು ಮಹಿಳಾ ಜಾನಪದ ತಾಲೂಕು ಸಮ್ಮೇಳನ ಆಯೋಜಿಸುವ ಚಿಂತನೆ ನಡೆಸಲಾಗುವುದು ಎಂದರು.

ಜಿಲ್ಲಾ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಪರಿಷತ್ತಿನ ಮಹಿಳಾ ಘಟಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲಾ ಕಾಲೇಜು ಹಂತಗಳಲ್ಲಿ ಜಾನಪದ ಬೆಳವಣಿಗೆಗೆ ಜಾಗೃತಿ ಮೂಡಿಸಲು ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ಜಾನಪದ ಬೇರನ್ನು ಮತ್ತಷ್ಟು ಗಟ್ಟಿಗೊಳಿಸಲು ತಾಲೂಕು ಘಟಕ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಪರಿಷತ್ತಿನ ಎಲ್ಲರ ಸಲಹೆ, ಸಹಕಾರದೊಂದಿಗೆ ಮತ್ತಷ್ಟು ಕಾರ್ಯಕ್ರಮಗಳ ಆಯೋಜನೆಯ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಹಿಳೆಯರಿಂದ ಆಕರ್ಷಕ ರಂಗೋಲಿ ಬಿಡಿಸಿದ್ದು ಗಮನಸೆಳೆಯಿತು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಕೌಜಲಗಿ, ಕಜಾಪ ಗೌರವಾಧ್ಯಕ್ಷ ಸವಿತಾ ಸತ್ಯನಾರಾಯಣ್, ದಾಸ ಸಾಹಿತ್ಯ ಜಿಲ್ಲಾಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ಪುಷ್ಪಾ ಅನಂತನಾಯ್ಕ, ಕುಪ್ಪಾಳು ಶಾಂತಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net