ಮುಳಬಾಗಿಲು
ಕೋಲಾರ ಜಿಲ್ಲೆಯ ಜಾನಪದ ಸಂಪತ್ತು ದಿಗ್ಭ್ರಮೆಗೊಳಿಸುವಂತಹದ್ದು. ಆದರೆ ಅದು ಬಹಳಷ್ಟು ತೆಲುಗಿನಲ್ಲಿರುವುದರಿಂದ ಉದಾಸೀನಕ್ಕೊಳಗಾಗಿದೆ. ಜಾನಪದ ಸಾಹಿತ್ಯಕ್ಕೆ ಭಾಷೆ, ಗಡಿಗಳ ಹಂಗಿರಬಾರದು. ಅವುಗಳನ್ನು ಸಂಗ್ರಹಿಸಿ ದಾಖಲಿಸದಿದ್ದರೆ ಮುಂದಿನ ತಲೆಮಾರಿಗೆ ಕುರುಹೇ ಇಲ್ಲದಂತಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಜೆ.ಬಾಲಕೃಷ್ಣ ಆಶಯ ವ್ಯಕ್ತಪಡಿಸಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಲಾರ ಕನ್ನಡವೂ ವಿಶಿಷ್ಟ ಪ್ರಾದೇಶಿಕ ಪರಿಭಾಷೆ ಲಕ್ಷಣಗಳನ್ನು ಹೊಂದಿದ್ದು ಅದರ ಅಧ್ಯಯನಗಳು ನಡೆಯದಿರುವುದು ವಿಷಾದನೀಯ. ಜಿಲ್ಲೆಯಲ್ಲಿ ಕನ್ನಡ ಹಾಗೂ ತೆಲುಗು ಸಹೋದರ ಭಾಷೆಗಳಂತೆ ಇದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ದ್ವಿಭಾಷೆಗಳ ಕೊಡುಕೊಳ್ಳುವಿಕೆ ವ್ಯವಹಾರ ನಡೆದಿಲ್ಲ. ರಾಜ್ಯದಲ್ಲಿ ಇತರೆಡೆ ಕನ್ನಡದಿಂದ ತೆಲುಗಿಗೆ ಬಹಳಷ್ಟು ಸಾಹಿತ್ಯಪರಸ್ಪರ ಅನುವಾದಗೊಳ್ಳುತ್ತಿವೆ. ಆದರೆ ಆ ಕಾರ್ಯ ಕೋಲಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ನಡೆಯಬೇಕಿದೆ ಎಂದು ಇಂಗಿತ ವ್ಯಕ್ತಪಡಿಸಿದರು.
ಜಾನಪದ ಸಾಹಿತ್ಯ ದಾಖಲಿಸಿ: ರಾಮಾಯಣ, ಮಹಾಭಾರತ, ಪುರಾಣಗಳು ಲಿಖಿತ ರೂಪದಲ್ಲಿ ದಾಖಲಾಗುವ ಮೊದಲು ಸಾಹಿತ್ಯವು ಕಥೆ, ಹಾಡುಗಳ ರೂಪದಲ್ಲಿ ಬಾಯಿಂದ ಬಾಯಿಗೆ ಹರಿದುಹೋಗುತ್ತಿತ್ತು. ಬಹುತೇಕ ಜಾನಪದ ಸಾಹಿತ್ಯ ಜನರ ಬಾಯಿಂದ ಬಾಯಿಗೆ ಹರಿದುಹೋಯಿತೇ ವಿನಾ ದಾಖಲಾಗಿ ಉಳಿಯಲಿಲ್ಲ. ಹೀಗಾಗಿ ನಾವು ಇಂತಹ ಜಾನಪದ ಸಾಹಿತ್ಯವನ್ನು ದಾಖಲಿಸಬೇಕಿದೆ ಎಂದರು.
ಸಾಹಿತ್ಯದಿಂದ ಬದುಕಿಗೆ ಚಾಲನೆ: ಬದುಕಿಗೆ ಚಾಲನೆ ನೀಡಿ, ಪ್ರೇರಣೆಯಿಂದ ನಿಗೂಢಗಳು, ಮಾನವ ಸಂಬಂಧಗಳನ್ನು ಅರಿತುಕೊಳ್ಳಲು ಸಾಹಿತ್ಯದಿಂದ ಸಾಧ್ಯವಾಗಿದೆ. ಹೀಗಾಗಿ ಇಂದು ನಾವೆಲ್ಲ ಸಾಹಿತ್ಯ ಹಾಗೂ ತಾಯಿನುಡಿಯ ಹೆಸರಿನಲ್ಲಿ ಸಂಭ್ರಮದಲ್ಲಿದ್ದೇವೆ ಎಂದು ಜೆ.ಬಾಲಕೃಷ್ಣ ಹೇಳಿದರು.
ಸಾಹಿತ್ಯದಿಂದ ಬದಲಾವಣೆ ಸಾಧ್ಯ: ಅಮೆರಿಕಾದ ವರ್ಜೀನಿಯಾದಲ್ಲಿ ಕರಿಯರನ್ನು ನಿಕೃಷ್ಟವಾಗಿ ಕಂಡು ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ವಿರೋಧಿಸಿ ಅಲ್ಲಿನ ಶಾಲೆಯ ಗೋಡೆಯ ಮೇಲೆ ಜನಾಂಗೀಯ ನಿಂದನೆ ವಾಕ್ಯಗಳನ್ನು ಬರೆಯಲಾಗಿತ್ತು. ಇದು ಅಲ್ಲಿನ ಸಾಮರಸ್ಯಕ್ಕೆ ಧಕ್ಕೆ ತಂದಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16ರಿಂದ 17ರ ವಯಸ್ಸಿನ ಐದು ಮಕ್ಕಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಗ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿ ಎಂಬಾಕೆ ಕರಿಯರು ತಮ್ಮ ಸಿಟ್ಟು, ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ ಎಂದು ಅರಿತು ಆ ಯುವಕರಿಗೆ 35 ಆಯ್ದ ಪುಸ್ತಕಗಳನ್ನು ಓದುವ ಶಿೆ ನೀಡಲಾಯಿತು. ಅವರು ತಿಂಗಳೊಂದಕ್ಕೆ ಆ ಪಟ್ಟ್ಟಿಯಿಂದ ಬೇಕಾದ ಒಂದು ಪುಸ್ತಕ ಆಯ್ದುಕೊಂಡು ಓದಿ, ಆ ಪುಸ್ತಕದ ಬಗೆಗೆ ಒಂದು ಪ್ರಬಂಧ ಬರೆಯಬೇಕು. 35 ತಿಂಗಳಲ್ಲಿ ಮಹತ್ತರ ಬದಲಾವಣೆ ಕಂಡುಬಂದಿತು. ಹೀಗಾಗಿ ಸಾಹಿತ್ಯ ಓದಿನಿಂದ ಮನುಷ್ಯನಲ್ಲಿ ಸಹಜ ಬದಲಾವಣೆ ಕಾಣಬಹುದು ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯಪಟ್ಟರು. ಸಾಹಿತ್ಯ ವಿಕಾಸವನ್ನು ನೋಡುವುದರಿಂದ ಮಾನವ ಸಂಸತಿ ಹಾಗೂ ಭಾಷೆಯ ವಿಕಾಸದ ಕುರಿತಾದ ವಿಶಿಷ್ಟ ಒಳನೋಟ ಕಾಣಬಹುದು. ಮಾನವನ ನಡವಳಿಕೆ, ಸ್ವಭಾವ ಹಾಗೂ ನಂಬಿಕೆಯ ಮೌಲ್ಯಗಳು ರೂಪುಗೊಳ್ಳುವಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮನುಷ್ಯರಾಗಿ ಬದುಕಿ: ರಾಜಕೀಯ ಕ್ಷೇತ್ರಗಳಲ್ಲಿ ಪಲ್ಲಟಗಳು ಸಾಹಿತ್ಯ ಕ್ಷೇತ್ರದಲ್ಲಿ ಪರಿಣಾಮ ಬೀರಿ ಧ್ರುವಿಕರಣಕ್ಕೆ ಕಾರಣವಾಗುತ್ತಿದೆ. 1970ರಲ್ಲಿ ಬೂಸಾ ಹೇಳಿಕೆ ವಿವಾದಿಂದಾಗಿ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಂರ್ಷಕ್ಕೆ ಕಾರಣವಾಯಿತು. ಆದರೆ 1936ರಲ್ಲಿ ಈ.ಪಿ.ರೈಸ್ ಎಂಬ ಮಿಷನರಿ ಜಗತ್ತಿನ ಜ್ಞಾನ ಮತ್ತು ಪ್ರೇರಣೆಗೆ ಕನ್ನಡ ಸಾಹಿತ್ಯದ ಕೊಡುಗೆ ಏನೂ ಇಲ್ಲ ಎಂದು ಹೇಳಿದ್ದರು. ಆದರೆ ಬೂಸಾ ಹೇಳಿಕೆಯನ್ನು ಕನ್ನಡಿಗರು ಮಾತ್ರ ಖಂಡಿಸಿದ್ದು ರೈಸ್ ಹೇಳಿಕೆಯನ್ನು ಕನ್ನಡಿಗರು ಯಾರೂ ಖಂಡಿಸಿರಲಿಲ್ಲ. ನಾಡಿನ ಹಿತಾಸಕ್ತಿ ಕಡೆಗಣನೆಯಾದಾಗ ಖಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ದಲಿತ ಬಂಡಾಯ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯನ್ನು ಉಂಟು ಮಾಡಿತ್ತು. ಇದಕ್ಕೆ ಕೋಲಾರ ಜಿಲ್ಲೆ ಕೊಡುಗೆ ಮಹತ್ತರವಾಗಿದೆ. ದಲಿತ ಹೋರಾಟಗಳು ಪ್ರತಿಭಟನೆಯ ಕೇಂದ್ರ ಕೋಲಾರವಾಗಿತ್ತು. ಅನುಸೂಯಮ್ಮ ಅತ್ಯಾಚಾರ ವಿರುದ್ಧ ಪ್ರಾರಂಭವಾದ ಈ ಹೋರಾಟ ದಲಿತ ಸಾಹಿತ್ಯಕ್ಕೂ ನಾಂದಿಯಾಯಿತು. ಜಾತಿ, ಮತ, ಪಂಥಗಳಿಂದ ಹೊರಬಂದು ಮನುಷ್ಯನಾಗಿ ಬದುಕಬೇಕು ಎಂದು ಬಾಲಕೃಷ್ಣ ಕರೆ ನೀಡಿದರು.
ಸ್ವತಂತ್ರ ಪೂರ್ವದಲ್ಲಿ ಶೇ.20ರಷ್ಟು ಅಕ್ಷರವಂತರಿದ್ದು, ಶೇ.80ರಷ್ಟು ಜನ ಅನಕ್ಷರಸ್ಥರಾಗಿದ್ದರು. ಅಕ್ಷರ ಇಲ್ಲದ ಸಮುದಾಯಗಳು ಶೋಷಣೆಗೆ ಒಳಗಾಗಿದ್ದು ಸ್ವಾತಂತ್ರ$್ಯ ಬಂದು 75 ವರ್ಷಗಳ ನಂತರ ಇಂದು ಶೇ.80ರಷ್ಟು ಅಕ್ಷರವಂತರಾಗಿದ್ದು ಇನ್ನೂ ಶೇ.20ರಷ್ಟು ಅಕ್ಷರವಂತರಾಗಬೇಕಿದೆ. ಎಲ್ಲರೂ ವಿದ್ಯಾವಂತರಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಕರೆ ನೀಡಿದರು.
ಮುಳಬಾಗಿಲಿನಲ್ಲಿ ಆಯೋಜಿಸಿದ್ದ 20 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಅನಕ್ಷರಸ್ಥರು ಸಂಖ್ಯೆ ಹೆಚ್ಚಾದರೆ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಇಂಗ್ಲೀಷ್ ಕಲಿಯದಿದ್ದರೆ ಮನೆಯಲ್ಲಿ ಸಗಣಿ ಎತ್ತಬೇಕಾದ ಸ್ಥಿತಿ ಇರುತ್ತಿತ್ತು ಎಂದು ಕುವೆಂಪು ಹೇಳಿದ್ದರು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕನ್ನಡ ಜತೆಗೆ ವಿವಿಧ ಭಾಷೆಗಳನ್ನು ಕಲಿಸಬೇಕು ಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಸಾಹಿತಿ ವಿ.ಮುನಿವೆಂಕಟಪ್ಪ, ಅವಣಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಮಾತನಾಡಿದರು. ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಹರೀಶ್, ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್, ಡಾ.ಆರ್.ಶಂಕರಪ್ಪ, ಜೆ.ಜಿ.ನಾಗರಾಜ್, ವಿನಯ ಗಂಗಾಪುರ, ಕೆ.,ಎಸ್.ಗಣೇಶ್, ಶಂಕರಕೇಸರಿ, ನಂದಕಿಶೋರ್ ಮತ್ತಿತರರು ಇದ್ದರು.
ಭವ್ಯ ಮೆರವಣಿಗೆ: ಮುತ್ಯಾಲಪೇಟೆಯ ಗಂಗಮ್ಮ ದೇವಾಲಯದ ಮುಂಭಾಗದಿಂದ ಆರಂಭಗೊಂಡ ಸಮೇಳನ ಅಧ್ಯಕ್ಷರ ಮತ್ತು ಭುವನೇಶ್ವರಿದೇವಿಯ ಮೆರವಣಿಗೆಗೆ ಶಾಸಕ ಎಚ್ನಾಗೇಶ್ ಚಾಲನೆ ನೀಡಿದರು. ಎಂ.ಸಿ. ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೊಮೇಶ್ವರಪಾಳ್ಯ ವೃತ್ತ, ಹೊಸಪಾಳ್ಯ ವೃತ್ತ, ಬಜಾರು ರಸ್ತೆ, ಡಿವಿಜಿ ವೃತ್ತ ಮಾರ್ಗವಾಗಿ ನೇತಾಜಿ ಕ್ರೀಡಾಂಗಣಕ್ಕೆ ಸಾವಿರಾರು ಕನ್ನಡ ಅಭಿಮಾನಿಗಳ ಜೈಕಾರದೊಂದಿಗೆ ಆಗಮಿಸಿತು. ಮೆರವಣಿಗೆ ಆರಂಭದ ಮೊದಲು ಸಮ್ಮೇಳನ ಅಧ್ಯಕ್ಷರು ಮತ್ತು ಜಿಲ್ಲಾ ಕಸಾಪ ಅಧ್ಯಕ್ಷರು ಇಲ್ಲದಿರುವುದು ಕಂಡುಬಂತು. ಮೆರವಣಿಗೆ ಮಾರ್ಗಮಧ್ಯದಲ್ಲಿ ಸೇರಿಕೊಂಡು ಅಂಬೇಡ್ಕರ್ ಪ್ರತಿಮೆಗೆ ಹೂವು ಮಾಲೆ ಹಾಕಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
ಸಮ್ಮೇಳನದಲ್ಲಿ ಇಂದು : 15ರಂದು ಬೆಳಗ್ಗೆ 9.30ರಿಂದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಡಾ.ನಟರಾಜ್ ಬೂದಾಳ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಂಸತಿ, ಸಹಬಾಳ್ವೆಯ ವಿಚಾರಗೋಷ್ಠಿ ನಡೆಯಲಿದೆ. ಬೆಳಗ್ಗೆ 11ರಿಂದ 11.45ರವರೆಗೆ "ಕರ್ನಾಟಕ ಶಿಕ್ಷಣ ನೀತಿಯ ಬಿಕ್ಕಟ್ಟುಗಳು' ಎಂಬ ವಿಶೇಷ ಉಪನ್ಯಾಸವನ್ನು ಪಿ.ವಿ.ನಿರಂಜನಾರಾಧ್ಯ ನೀಡಲಿದ್ದಾರೆ. ಮಧ್ಯಾಹ್ನ 12 ರಿಂದ 1.30ರವರೆಗೂ ಡಾ.ಕೆ.ವೈ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು&ಬರಹ ಉಪನ್ಯಾಸ ನಡೆಯಲಿದೆ. ಸಂಜೆ 4.30ಕ್ಕೆ ಪ್ರಧಾನ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನದ ಸಮಾರೋಪ ನಡೆಯಲಿದೆ. ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಡಿ.ಡೋಮಿನಿಕ್, ಸಮ್ಮೇಳನಾಧ್ಯಕ್ಷ ಡಾ.ಜೆ.ಬಾಲಕೃಷ್ಣ, ಸಂಸದ ಎಸ್.ಮುನಿಸ್ವಾಮಿ, ಜೆಡಿಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ.
ನಾನೊಬ್ಬ ವಿಜ್ಞಾನದ ವಿದ್ಯಾರ್ಥಿ. ವಿಜ್ಞಾನ ಮತ್ತು ಮಾನವಿಕ ಸಂಬಂಧವು ಬಹಳ ಹಿಂದಿನಿಂದಲೂ ಪರಸ್ಪರ ಸಂರ್ಷದಿಂದಲೇ ಕೂಡಿದೆ. ಮಾನವಿಕಗಳು ಕೇವಲ ಪಠ್ಯಗಳೊಂದಿಗೆ ವ್ಯವಹರಿಸುತ್ತವೆ ಹಾಗೂ ವಿಜ್ಞಾನ ವಸ್ತು ಮತ್ತು ಸಿದ್ಧಾಂತಗಳೊಂದಿಗೆ ವ್ಯವಹರಿಸುತ್ತವೆ. ಇವೆರಡೂ ಒಂದುಗೂಡಿದಲ್ಲಿ ಜಗತ್ತನ್ನು ಅರಿತುಕೊಳ್ಳುವುದು ಸುಲಭ. ಆದರೆ ಜಗತ್ತನ್ನು ಅರಿಯುವ ಕುತೂಹಲವೇ ನನ್ನನ್ನು ಸಾಹಿತ್ಯ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಕರೆದೊಯ್ದಿತು. ಡಾ. ಜೆ.ಬಾಲಕೃಷ್ಣ, ಸಮ್ಮೇಳನ ಅಧ್ಯಕ್ಷ
ಸಾಂಸತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ೇತ್ರಗಳಲ್ಲೂ ಕನ್ನಡ ಭಾಷೆ ಬಳಸಬೇಕೆಂಬ ಒತ್ತಾಯಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ವೈದ್ಯಕಿಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಕನ್ನಡದಲ್ಲಿ ನೀಡಲು ಸರ್ಕಾರ ಮುಂದಾದರೂ ದಾಖಲಾತಿಗೆ ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದಾರೆ. ನಮ್ಮ ಮುತ್ತಾತ, ಅಪ್ಪ ಸೇರಿದಂತೆ ನಮ್ಮ ಕುಟುಂಬದ ಪೂರ್ವಿಕರು ಅಕ್ಷರವಂತರಾಗಿದ್ದು ನಮ್ಮ ಮನೆಗೆ ಎಲ್ಲ ವರ್ಗದವರು ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದರು. ಜ್ಞಾನವಂತರಲ್ಲಿ ಜಾತಿ ಭೇದ&ಭಾವ ಇರುವುದಿಲ್ಲ ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಎಚ್.ನಾಗೇಶ್ ಶಾಸಕ
ಮುಳಬಾಗಿಲು ದಾಸಶ್ರೇಷ್ಠರು ಕಟ್ಟಿದ ಊರು, ಡಿವಿಜಿ ಹುಟ್ಟಿ ಬೆಳೆದ ತವರಾಗಿದೆ. ಕನ್ನಡದಲ್ಲಿ ಹರಿದಾಸ ಸಾಹಿತ್ಯವನ್ನು ಶ್ರೀ ಪಾದರಾಜರು ಶ್ರೀಮಂತಗೊಳಿಸಿದ ಪುಣ್ಯ ತಪೋಭೂಮಿ. ಮೂಡಲಬಾಗಿಲಿನಲ್ಲಿ 20 ವರ್ಷಗಳ ನಂತರ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಸುವರ್ಣ ಅವಕಾಶ ಒದಗಿಬಂದಿರುವುದು ಸಂತಸವಾಗಿದೆ. ಎನ್.ಬಿ.ಗೋಪಾಲಗೌಡ ಕಸಾಪ ಜಿಲ್ಲಾಧ್ಯಕ್ಷ