ಜಾನಪದ ಸಾಹಿತ್ಯ ಅಜರಾಮರ

bhr antkiw
ಬಾಳೆಹೊನ್ನೂರಿನಲ್ಲಿ ಜಾನಪದ ಕೋಲಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತೀಶ್ ಅರಳೀಕೊಪ್ಪ, ಯಜ್ಞಪುರುಷ ಭಟ್, ಎಂ.ಕೆ.ಪುಟ್ಟರಾಜು, ಶೇಖರ್ ಇತರರಿದ್ದರು.
Published on

ಬಾಳೆಹೊನ್ನೂರು: ಸಾವಿರಾರು ವರ್ಷ ಇತಿಹಾಸವುಳ್ಳ ಜಾನಪದ ಸಾಹಿತ್ಯ ಬಾಯಿಂದ ಬಾಯಿಗೆ ಪ್ರಸಾರಗೊಂಡು ಅಜರಾಮರವಾಗಿದೆ ಎಂದು ಎನ್.ಆರ್.ಪುರ ತಾಲೂಕು ಕಸಪಾ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ ಹೇಳಿದರು.

ಪಟ್ಟಣದ ಮಾರಿಗುಡಿರಸ್ತೆ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸೋಮವಾರ ಆಯೋಜಿಸಿದ್ದ ಜಾನಪದ ಕೋಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆ ಭರಾಟೆಯಲ್ಲಿ ಹಾಗೂ ರಿಯಾಲಿಟಿ ಶೋಗಳ ನಡುವೆ ಜಾನಪದ ಕಲೆಗಳು ನಶಿಸುತ್ತಿದ್ದು, ಇಂಥ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಕಲಾವಿದರನ್ನು ಮನೆ ಅಂಗಳಕ್ಕೆ ಕರೆಸಿ ಕಾರ್ಯಕ್ರಮ ನಡೆಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಜಾನಪದ ಸಾಹಿತ್ಯದಿಂದ ಸಮಾಜದ ಸಾಮರಸ್ಯ ಕಾಪಾಡಿಕೊಳ್ಳಬಹುದು ಎಂದರು.

ಹಿರಿಯ ಆರೋಗ್ಯ ನಿರೀಕ್ಷಕ ಪಿ.ಕೆ.ಭಗವಾನ್ ಮಾತನಾಡಿ, ಚುಸಾಪ ಆಯೋಜಿಸಿದ ಜಾನಪದ ಕಾರ್ಯಕ್ರಮ ನೋಡುಗರನ್ನು 40 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗಿದೆ. ಕಲಾವಿದರ ಅದ್ಭುತ ಜ್ಞಾನ ಶಕ್ತಿ ಅಪಾರವಾಗಿದೆ ಎಂದು ಹೇಳಿದರು.

ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಂಟಿಗೆ-ಪಿಂಟಿಗೆ ಕಾರ್ಯಕ್ರಮ ನಡೆಯುತ್ತಿದ್ದು, ಯುವಕರು ಕೋಲಾಟದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಯುವಕರು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ನೀಡುವಂತಾಗಬೇಕು ಎಂದರು.

ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಭಾಷಣ ಹಾಗೂ ಉಪನ್ಯಾಸದಿಂದ ಜಾನಪದ ಸಾಹಿತ್ಯ ಬೆಳವಣಿಗೆ ಆಗುವುದಿಲ್ಲ. ಬದಲಿಗೆ ದಿನಗಟ್ಟಲೆ ಹಾಡಬಲ್ಲ ಅನಕ್ಷರಸ್ಥ ಕಲಾವಿದರನ್ನು ಕರೆಸಿ ಅವರು ಹಾಡುವ ಜಾನಪದಗೀತೆಯನ್ನು ದಾಖಲೆ ಮಾಡಿಕೊಳ್ಳಬೇಕು. ಆಗ ಮಾತ್ರ ಜಾನಪದ ಸಾಹಿತ್ಯ ಜೀವಂತವಾಗಿರಲು ಸಾಧ್ಯ ಎಂದು ತಿಳಿಸಿದರು.

ಪ್ರತಿ ಜಾನಪದಗೀತೆಯಲ್ಲೂ ಬದುಕನ್ನು ಕಟ್ಟಿಕೊಳ್ಳುವ ಸಂದೇಶವಿದೆ. ಕಲಾವಿದರು ದಿನ ನಿಗದಿ ಮಾಡಿ ಕಾಡಿನಿಂದ ಕೋಲಾಟ ಆಡುವ ಕೋಲನ್ನು ಕಡಿದು ತಂದು ದೇವಸ್ಥಾನದ ಮುಂಭಾಗದಲ್ಲಿ ಕೋಲು ಪೂಜೆ ಮಾಡಿ ಆಟವಾಡಲು ಪ್ರಾರಂಭಿಸುವುದು ಸಂಪ್ರದಾಯ. ದೀಪಾವಳಿ ಸಂದರ್ಭದಲ್ಲಿ ಮಲೆನಾಡಿನಲ್ಲಿ ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ಪೂಜಿಸುವುದು ರೈತರ ಮನೆಯಲ್ಲಿ ಇಂದಿಗೂ ಚಾಲ್ತಿಯಲ್ಲಿದೆ ಎಂದು ಹೇಳಿದರು. ನಿವೃತ್ತ ಪ್ರಾಚಾರ್ಯ ಎಂ.ಕೆ.ಪುಟ್ಟರಾಜು, ಕಲಾವಿದ ಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net