

ಶ್ರೀರಂಗಪಟ್ಟಣ: ಮಂಡ್ಯದಲ್ಲಿ ಡಿ.9ರಂದು ನಡೆಯುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರಯುಕ್ತ ಜಿಲ್ಲೆಯಲ್ಲಿ ಸಂಚಾರ ನಡೆಸುತ್ತಿರುವ ಕರ್ನಾಟಕ ಜಾನಪದ ಸಮ್ಮೇಳನ ತೇರನ್ನು ಶ್ರೀರಂಗಪಟ್ಟಣದಲ್ಲಿ ಸ್ವಾಗತಿಸಲಾಯಿತು.
ತಾಲೂಕಿನ ದರಸಗುಪ್ಪೆ ಗ್ರಾಮಕ್ಕೆ ಗುರುವಾರ ಪಾಂಡವಪುರ ತಾಲೂಕಿನಿಂದ ಆಗಮಿಸಿದ ರಥವನ್ನು ಅಖಿಲ ಕರ್ನಾಟಕ ಜಾನಪದ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀಣಾ ರಾಜೇಗೌಡ ನೇತೃತ್ವದಲ್ಲಿ ತೇರಿನ ಉಸ್ತುವಾರಿಗಳಿಗೆ ವೀಳ್ಯದೆಲೆ ಅಡಕೆ, ಕಬ್ಬು ಸಹಿತ ಬೂದುಕುಂಬಳಕಾಯಿ ಇಳಿ ತೆಗೆದು ಜತೆಗೆ ಪೂರ್ಣಕುಂಭ ಕಳಸಗಳನ್ನು ಹೊತ್ತ ಮಕ್ಕಳು ಹಾಗೂ ಜಾನಪದ ಕಲಾತಂಡಗಳೋಂದಿಗೆ ಸ್ವಾಗತ ನೀಡಿದರು.
ಬಳಿಕ ಜಾನಪದ ತೇರು ಕಿರಂಗೂರು ಗ್ರಾಮ ಪಂಚಾಯಿತಿ, ಕೆ.ಶೆಟ್ಟಹಳ್ಳಿ ಪಂಚಾಯಿತಿ, ಮುಂಡುಂಗದೊರೆ ಪಂಚಾಯಿತಿ, ದೊಡ್ಡಪಾಳ್ಯ, ಮಹದೇವಪುರ, ಅರಕೆರೆ, ತಡಗವಾಡಿ, ಕೊಡಿಯಾಲ ಗ್ರಾಮಗಳಲ್ಲಿ ತೆರಳಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮದ ಮುಖಂಡರೊಂದಿಗೆ ಶುಭಹಾರೈಸಿ ಬಳಿಕ ಮಂಡ್ಯ ತಾಲೂಕಿಗೆ ಕಳುಹಿಸಿಕೊಟ್ಟರು.
ಸಂಘದ ತಾಲೂಕು ಪದಾಧಿಕಾರಿಗಳಾದ ಕಾರ್ಯದರ್ಶಿ ಉಮಾಶಂಕರ್, ಪತ್ರಿಕಾ ಕಾರ್ಯದರ್ಶಿ ಕೂಡಲಕುಪ್ಪೆ ಸೋಮಶೇಖರ್, ಸಿ.ಆರ್.ಪಾಪಣ್ಣ, ಮೇಳಾಪುರ ಜಯರಾಮಣ್ಣ, ಮಹದೇವುಪುರ ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.