ಜಾನಪದ ಸಂಸ್ಕೃತಿಯಲ್ಲಿದೆ ಬದುಕಿನ ಮೌಲ್ಯ

sri janapada
ಕರ್ನಾಟಕ ಜಾನಪದ ಪರಿಷತ್ತುನಿಂದ ಜಾನಪದ ಕಲಾವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುಗಧರ್ಮ ರಾಮಣ್ಣ, ರೇಣುಕಾ, ಲತಾ, ಶ್ರೀಧರರಾವ್ ಅಣ್ಣುಕೊಡಿಗೆ, ಆನಂದಸ್ವಾಮಿ, ರಮೇಶ್ ಶುನ್ಯ, ಆಗುಂಬೆ ಗಣೇಶ್ ಹೆಗಡೆ ಇತರರಿದ್ದರು.
Published on

ಶೃಂಗೇರಿ: ಮಸ್ತಕ ಸರಿಯಿದ್ದರೆ ಪುಸ್ತಕ ನಮ್ಮನ್ನು ಸೆಳೆದುಕೊಳ್ಳುತ್ತದೆ. ವಿದ್ಯೆ ಸಾಧನೆಯಿಂದ ಲಭಿಸುತ್ತದೆ. ವಿದ್ವತ್ತು ಲೋಕಾನುಭವದ ಅಲೌಕಿಕ ಮೌಲ್ಯ ಎಂದು ಯುಗಧರ್ಮ ರಾಮಣ್ಣ ತಿಳಿಸಿದರು.

ಮಂಗಳವಾರ ಕರ್ನಾಟಕ ಜಾನಪದ ಪರಿಷತ್ ಹಾಗೂ ಪಡುಬೈಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಆಯೋಜಿಸಿದ್ದ ಜಾನಪದ ಕಲಾವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತನ್ನು ನೋಡಿ ನಾವು ಕಲಿಯುವುದಕ್ಕಿಂತ ನಮ್ಮನ್ನು ನೋಡಿ ಜಗತ್ತು ಕಲಿಯಬೇಕು. ಅಂತಹ ಸಾಧನೆ ನಾವು ಮಾಡಬೇಕು ಎಂದರು.

ಉಸಿರು ಇರುವ ತನಕ ಹುಷಾರಾಗಿ ಸಮುದಾಯದ ಜತೆ ಬೆರೆಯಬೇಕು. ನಾಲಿಗೆ ಒಳ್ಳೆಯದಾದರೆ ಮಾತ್ರ ನಾಡಿಗೆ ಒಳಿತು. ಇಂತಹ ಮೌಲ್ಯಗಳು ನಮಗೆ ಜಾನಪದ ಸಂಸ್ಕೃತಿಯಿಂದ ದೊರಕುತ್ತದೆ. ಜನಪದವು ವಿಶ್ವಮಾನ್ಯತೆ ಪಡೆದಿದ್ದು, ಅದರ ನೆಲೆಗಟ್ಟು ಗ್ರಾಮೀಣ ಭಾಗದಲ್ಲಿ ಮಾತ್ರ ಉಳಿದುಕೊಂಡಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಹೊಣೆಗಾರಿಕೆ ಕರ್ನಾಟಕ ಜಾನಪದ ಪರಿಷತ್ ಮೇಲಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜನಪದ ಸಾಹಿತ್ಯ ಜನವಾಣಿಯ ಬೇರು. ಕವಿವಾಣಿಯ ಹೂವು. ಹಳೇ ಬೇರು, ಹೊಸ ಚಿಗುರು ಮರ ಸೊಬಗು ಎಂಬಂತೆ ಆಧುನಿಕ ಸಂಗೀತ, ಸಾಹಿತ್ಯ, ಕಲೆಯ ಮೂಲ ನೆಲೆಗಟ್ಟು ಜನಪದವಾಗಿದೆ. ಸ್ವಸ್ಥ ಸಮಾಜ ಕಾಣಬೇಕಿದ್ದರೆ ಜನಪದ ಸಂಸ್ಕೃತಿ ಹಾಗೂ ಕಲೆ ಅತಿ ಅಗತ್ಯ. ಮಾನವೀಯ ಸಂಬಂಧಗಳು, ಸಹಕಾರ ಭಾವನೆ, ಭಾವನಾತ್ಮಕ ಸಂಬಂಧಗಳು ಮುಂತಾದ ಮೌಲ್ಯಾಧಾರಿತ ಗುಣಗಳು ಜಾನಪದ ಸಾಹಿತ್ಯದಲ್ಲಿ ಅಡಗಿದೆ. ಜಾನಪದ ಭಾರತೀಯ ಸಂಸ್ಕೃತಿಯ ಅಡಿಗಲ್ಲು. ಶಾಲಾ ಕಾಲೇಜುಗಳಲ್ಲಿ ಪಠ್ಯಪುಸ್ತಕಗಳ ಮೂಲಕ ಜನಪದ ಮಕ್ಕಳನ್ನು ತಲುಪಬೇಕಿದೆ. ಆಗ ಮಾತ್ರ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆ ನಿರೀಕ್ಷಿಸಲು ಸಾಧ್ಯ ಎಂದರು.

ಸ್ಥಳೀಯ ಕಲಾವಿದರಾದ ಕಣದಮನೆ ಜಗದೀಶ್, ಯಡದಾಳು ಪ್ರದೀಪ್, ಗುತ್ತಳಿಕೆ ಕೇಶವ್ ಅವರ ಜನಪದ ಹಾಡುಗಳು ಹಾಗೂ ಹಾಸ್ಯ ಜನಮೆಚ್ಚುಗೆಗೆ ಪಾತ್ರವಾಯಿತು.

ಮೆಣಸೆ ಗ್ರಾಪಂ ಸದಸ್ಯರಾದ ರಾಜುಶೂನ್ಯ, ಸವಿತಾ ಶಿವಶಂಕರ್, ತಾಲೂಕು ಕಜಾಪ ಅಧ್ಯಕ್ಷ ದಿನೇಶ್ ಅಂಗುರ್ಡಿ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಉದ್ಯಮಿ ಪಿ.ಬಿ. ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net