

ಮುಂಡರಗಿ: ಗುರುವಾರ ನಿಧನ ಹೊಂದಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ ಭಾವಚಿತ್ರಕ್ಕೆ ಗುರುವಾರ ಸ್ಥಳೀಯ ರಂಗಭೂಮಿ ಕಲಾವಿದರು, ಸಾಹಿತಿಗಳು ಪಟ್ಟಣದ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ರಂಗಭೂಮಿ ಕಲಾವಿದ ವೈ.ಎನ್. ಗೌಡರ ಮಾತನಾಡಿ, ಹಿರಿಯ ಕಲಾವಿದ ಡಾ.ಟಿ.ಬಿ. ಸೊಲಬಕ್ಕನವರ ನಿಧನದಿಂದ ದೇಶೀಯ ಸಂಸ್ಕೃತಿ ಕಳಚಿದಂತಾಗಿದೆ. ಸಾಂಸ್ಕೃತಿಕ ಲೋಕದಲ್ಲಿ ಸಾಮಾಜಿಕ ಚಿಂತನೆ ಸೃಜನಶೀಲ ಭಾವನೆ ಹೊಂದಿದ್ದರು. ಅವರ ಬದುಕನ್ನು ಸಮಾಜಕ್ಕೆ ಮೀಸಲಿಟ್ಟು, ಸಾಮಾಜಿಕ ಹಸಿವು ನೀಗಿಸುವಂತ ಕೆಲಸ ಮಾಡಿದ್ದರು. ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾಲಯಕ್ಕೆ ಡಾ.ಟಿ.ಬಿ. ಸೊಲಬಕ್ಕನವರ ಹೆಸರಿಡಬೇಕು ಎಂದರು.
ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಜಾನಪದ ಕ್ಷೇತ್ರ, ಬಯಲಾಟ ಅಕಾಡೆಮಿ ಕ್ಷೇತ್ರದಲ್ಲಿ ಅಪಾರ ಕಾರ್ಯ ಮಾಡಿದ್ದರು. ಆದರ್ಶ, ಪ್ರಯೋಗಶೀಲ ವ್ಯಕ್ತಿತ್ವ ಸೊಲಬಕ್ಕನವರು ಹೊಂದಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ಹಿರೇಮಠ, ಹಿರಿಯ ಕಲಾವಿದ ಬಿ. ಬಾಬು ಮಾತನಾಡಿದರು. ಬಿ.ವಿ. ಮುದ್ದಿ, ಗೋವಿಂದರಾಜ ಹೆಗ್ಗಡಾಳ, ಎ.ಕೆ. ಮುಲ್ಲಾನವರ, ರಾಜಾಭಕ್ಷಿ ಬೆಟಗೇರಿ, ರಫೀಕ್ ಮುಲ್ಲಾ, ಫಕೀರಪ್ಪ ಉಳ್ಳಾಗಡ್ಡಿ, ಮುತ್ತಣ್ಣ ಹಾಳಕೇರಿ, ಪವನ ಚೋಪ್ರಾ, ದೇವು ಹಡಪದ, ಲಕ್ಷ್ಮಣ ತಗಡಿನಮನಿ, ಮಲ್ಲೇಶ ಹರಿಜನ ಇತರರು ಉಪಸ್ಥಿತರಿದ್ದರು.
EndFragment