

ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ಕಲ್ಪಿತ ಜನಜಾಗೃತಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಾನಪದ ವಿಚಾರ ಸಂಕಿರಣ ಮತ್ತು ಜಾನಪದ ಕಲಾ ಸಂಭ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಲಾ ತಂಡದೊಡನೆ ಅದ್ಧೂರಿಯಾಗಿ ಮೆರವಣಿಗೆ ಜರುಗಿತು.
ಮೆರವಣಿಗೆ ಮತ್ತು ಕಾರ್ಯಕ್ರಮದಲ್ಲಿ ಮಹಿಳಾ ವೀರಗಾಸೆ ಪಲ್ಲವಿ ಮತ್ತು ತಂಡದವರಿಂದ ಡೊಳ್ಳುಕುಣಿತ, ನಾಗ ನಾಯಕ್ ಮತ್ತು ತಂಡದಿಂದ ನಂದಿದ್ವಜ, ರವಿ ಮತ್ತು ತಂಡದವರಿಂದ ಕಂಸಾಳೆ, ಗಣೇಶ್ ನಾಯಕ್ ಮತ್ತು ತಂಡದವರಿಂದ ಜಾನಪದ ಸಂಗೀತ, ಎಂ.ಎನ್. ಲೋಕೇಶ್ ಮತ್ತು ತಂಡದಿಂದ ತತ್ವಪದ ಈ ರೀತಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜೂನಿಯರ್ ಪುನೀತ್ ರಾಜಕುಮಾರ್ ಖ್ಯಾತಿಯ ಚಂದ್ರ ಮೌರ್ಯ ಅವರ ಕಾರ್ಯಕ್ರಮ ಮೆರೆಗೂ ಕೊಟ್ಟಿತು.
ಇದಾದ ಬಳಿಕ ನಗರದ ಎವಿಕೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ಕಲೆಗಳು ಮತ್ತು ಜಾನಪದ ಕಲಾವಿದರ ಸ್ಥಿತಿಗತಿಯ ವಿಚಾರವಾಗಿ ಡಾ. ಹಂಪನಳ್ಳಿ ತಿಮ್ಮಗೌಡ ಅವರು ಉಪನ್ಯಾಸನ ನೀಡಿದರು. ಪ್ರಾಂಶುಪಾಲರಾದ ಡಾ. ಆರ್.ಟಿ. ಪ್ರತಿಮಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಸೀ.ಚ. ಯತೀಶ್ವರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರುತಿ ಕುಮಾರ್, ಹಿರಿಯ ಕಲಾವಿದರಾದ ಭಗವಾನ್ ಸಿಂಗ್ ಹಾಗೂ ರವಿ, ಕುಮಾರ್ ಕಟ್ಟೆ ಬೆಳುಗುಳಿ ಉಪಸ್ಥಿತರಿದ್ದರು.