

ಮೂಡಿಗೆರೆ: ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತಿರುವ ಜಾನಪದ ಶೈಲಿಯನ್ನು ಮುನ್ನ್ನೆಲೆಗೆ ತರಬೇಕಾಗಿರುವುದು ಕನ್ನಡಿಗರ ಕರ್ತವ್ಯ. ನಾಡು, ನುಡಿ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯನ್ನು ಜಾನಪದ ಶೈಲಿಯಲ್ಲಿ ಕಾಪಡಿಕೊಳ್ಳಬೇಕು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಜಾನಪದ ಎಸ್.ಬಾಲಾಜಿ ಹೇಳಿದರು.
ಕೋಳೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಕಲೆ, ಸಾಹಿತ್ಯ ಉಳಿದರೆ ನಾಡು ಉಳಿದಂತೆ ಎನ್ನುವ ಕಾರಣದಿಂದ ಮುಂದಿನ ಪೀಳಿಗೆಗೆ ಸಂಸ್ಕೃತಿ ಉಳಿಯಬೇಕು ಎಂದರು.
10 ವರ್ಷದಿಂದ ಜಾನಪದ ಪರಿಷತ್ ರಾಜ್ಯಾದ್ಯಂತ ಪ್ರಚಾರ ಆರಂಭಿಸಿದೆ. ಜಾನಪದ ಪ್ರಕಾರದಲ್ಲಿ ಕಲೆ ಮತ್ತು ಸಂಸ್ಕೃತಿ, ಒಗಟು, ಕಥೆ, ಕಥೆಗಳ ಪೀಠಿಕೆ, ಗ್ರಾಮೀಣ ಭಾಷಾ ಸೊಗಡು, ಆಹಾರ ಪದ್ಧತಿ, ಉಡುಗೆ ತೊಡುಗೆಗಳ ಪದ್ಧತಿ ಇದ್ದರೂ ನಮ್ಮ ಸಮಾಜ ಆಧುನಿಕತೆಗೆ ತಿರುಗಿ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದೆ. ಗ್ರಾಮೀಣ ಜನ ಬದಲಾಗಿದ್ದಾರೆ. ಆಧುನಿಕತೆ ಕಡೆಗೆ ತಿರುಗಿದ್ದಾರೆ. ನಗರ ಪ್ರದೇಶದವರು ಜಾನಪದದ ಕಡೆಗೆ ತಿರುಗಿಯೂ ನೋಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದಿಂದ ನಡೆಸುತ್ತಿದ್ದ ತಾಲೂಕು ಮಟ್ಟದ ಯುವಜನ ಮೇಳ ಸ್ಥಗಿತಗೊಳಿಸಲಾಗಿದೆ. ಯುವಜನ ಮೇಳವನ್ನು ಸರ್ಕಾರ ಮತ್ತೆ ಆರಂಭಿಸಬೇಕು. ಪ್ರತಿ ಹೋಬಳಿ, ತಾಲೂಕು ಜಿಲ್ಲಾ ಮಟ್ಟದಲ್ಲಿ ಮೇಳ ಆಯೋಜಿಸಬೇಕು. ಜಾನಪದ ಸಮ್ಮೇಳನವನ್ನೂ ಆಯೋಜಿಸಬೇಕು. ಜಾನಪದ ಸೊಗಡನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಹಾಗಾದರೆ ಮಾತ್ರ ಜಾನಪದ ಉಳಿಯಲು ಸಾಧ್ಯವಿದೆ ಎಂದು ತಿಳಿಸಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಜಾನಪದ ಕಲೆ ಮತ್ತು ಸಾಹಿತ್ಯ ಹಳ್ಳಿಗಾಡಿನ ಮಹಿಳೆಯರ ಬಾಯಿಯಿಂದ ಬಾಯಿಗೆ ಪದಗಳ ಜೋಡಣೆ ಮುಖಾಂತರ ಪ್ರಪಂಚವನ್ನು ಪರಿಚಯಿಸಿದೆ. ಹಿಂದೆ ಪ್ರತಿ ಮನೆಯಲ್ಲೂ ಜಾನಪದ ವಸ್ತುಗಳು ಕಾಣಸಿಗುತ್ತಿತ್ತು. ಈಗ ಅವೆಲ್ಲವೂ ಕಣ್ಮರೆಯಾಗಿವೆ. ಹಳ್ಳಿಗಳಲ್ಲಿ ಬಹುತೇಕ ಎಲ್ಲ ಹಿರಿಯ ಮಹಿಳೆಯರ ಕೈಯಲ್ಲಿ ಹಚ್ಚೆ ಗುರುತು ಇರುತ್ತಿತ್ತು. ಈಗ ಕಾಣಸಿಗುತ್ತಿಲ್ಲ. ಹೆಣ್ಣು ಮಕ್ಕಳು ಹಚ್ಚೆ ಗುರುತಿನ ಬದಲು ದೇಹದ ತುಂಬ ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದಾರೆ. ಹೆಣ್ಣನ್ನು ಗೌರವಿಸುವ ಸಮಾಜದಲ್ಲಿ ಹೆಣ್ಣು ಮಕ್ಕಳು ತುಂಡು ಬಟ್ಟೆ ತೊಟ್ಟು ಫ್ಯಾಷನ್ ಎನ್ನುವಂತಾಗಿದೆ. ಇಂಥ ಪರಿಸ್ಥಿತಿ ಮುಂದುವರಿಯಬಾರದು ಎಂದು ತಿಳಿಸಿದರು.
ಕಜಾಪ ತಾಲೂಕು ನೂತನ ಅಧ್ಯಕ್ಷ ರವಿ ಹಂತೂರು, ಜಿಲ್ಲಾಧ್ಯಕ ಓಣಿತೋಟ ರತ್ನಾಕರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಿ, ಜಾನಪದ ವಿಜಯ್, ರಾಜರತ್ನಂ, ಅಶೋಕ್, ಭಾನುಮತಿ, ಕಮಲಾಕ್ಷಮ್ಮ, ಸುಂದ್ರೇಶ್, ನಾಗೇಶ್, ಜಯಪ್ರಕಾಶ್, ಪೂರ್ಣೇಶ್, ಸುರೇಶ, ಮಗ್ಗಲಮಕ್ಕಿ ರಂಜಿತ್, ಸುರೇಂದ್ರ ಇತರರಿದ್ದರು.