ಜಾನಪದ ಕಲೆ ಬೆಳೆಸಲು ವಿನೂತನ ಕಾರ್ಯಕ್ರಮ

MDG janapada
ಮೂಡಿಗೆರೆಯಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಶಾರದಮ್ಮ ಮತ್ತು ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಡಾ. ಜಾನಪದ ಎಸ್. ಬಾಲಾಜಿ, ರಂಜನ್ ಅಜಿತ್‌ಕುಮಾರ್, ಭಾನುಮತಿ, ಟಿ.ಕಮಲಾಕ್ಷಮ್ಮ, ಎಂ.ಎಸ್.ವಿಶಾಲಾಕ್ಷಮ್ಮ, ಕೆ.ಸಿ.ಶಾಂತಪ್ಪ, ಸವಿತಾ ಸತ್ಯನಾರಾಯಣ ಇತರರಿದ್ದರು.
Published on

ಮೂಡಿಗೆರೆ: ಜಾನಪದ ಕಲೆಯನ್ನು ಮತ್ತೆ ಚಿಗುರಿಸಿ ಬೆಳೆಸುವ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಜಾನಪದ ಪರಿಷತ್ ಘಟಕ ಸ್ಥಾಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಜಾನಪದ ಕಲೆ ಬೆಳವಣಿಗೆಗೆ ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.

ಗುರುವಾರ ನಡೆದ ಕನ್ನಡ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಜಾನಪದ ಕಲೆಯ ಶೈಲಿ ವಿಭಿನ್ನವಾಗಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಸೊಗಡು ಇನ್ನೂ ಗಟ್ಟಿಯಾಗಿ ನೆಲೆನಿಂತಿದೆ ಎಂದರು.

ಬೆಂಗಳೂರು, ಮಂಗಳೂರಿನಂಥ ಮಹಾನಗರಗಳಲ್ಲಿ ಆಧುನಿಕ ಶೈಲಿಯ ಭರಾಟೆ ಹೆಚ್ಚಾಗಿದ್ದರೂ ಕೆಲವೆಡೆ ಜಾನಪದ ಶೈಲಿಗೂ ಮೆರುಗು ಸಿಗುತ್ತಿದೆ. ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ತುಮಕೂರು, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅತ್ಯುತ್ತಮವಾದ ಜಾನಪದ ಕಲಾ ಪ್ರಕಾರವಿದೆ. ಆಯಾ ವ್ಯಾಪ್ತಿಗನುಗುಣವಾಗಿ ಅತ್ಯುತ್ತಮವಾದ ಜಾನಪದ ಸಂಸ್ಕೃತಿ ಬೆಳೆಸಲು ಕನ್ನಡ ಜಾನಪದ ಪರಿಷತ್ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಯಾರಿ ನಡೆಸಿದೆ. ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತಿರುವ ಜಾನಪದ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರತಿಭೆ ಅನಾವರಣಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮಾತನಾಡಿ, ಗದ್ದೆ ನಾಟಿಯಿಂದ ಒನಕೆಯಿಂದ ಭತ್ತ ಕುಟ್ಟಿ ಅಕ್ಕಿಯನ್ನಾಗಿಸಿ, ಮಡಕೆಯಲ್ಲಿ ಕಟ್ಟಿಗೆ ಒಲೆಯಿಂದ ಹಿರಿಯರು ಅಡುಗೆ ತಯಾರಿಸುತ್ತಿದ್ದ ರೀತಿ ಜಾನಪದ ಸಂಸ್ಕೃತಿ. ಭತ್ತದ ನಾಟಿ, ಕಳೆ ಕೀಳುವಾಗ, ಭತ್ತದ ಕೊಯ್ಲು ಮಾಡುವಾಗ ಕಾರ್ಮಿಕ ಮಹಿಳೆಯರು ಹಾಡುತ್ತಿದ್ದ ಜಾನಪದ ಹಾಡು ಗ್ರಾಮೀಣ ಭಾಗದಲ್ಲಿ ಜಾನಪದ ಸಂಸ್ಕೃತಿಯಾಗಿ ಬೆಳೆಯಿತು. ಮಕ್ಕಳು ಆಡುತ್ತಿದ್ದ ಮರಕೋತಿ, ಚಿನ್ನಿದಾಂಡು, ಲಗೋರಿ, ಜೂಟಾಟಾ, ಕೋಲಾಟ, ಕಬಡ್ಡಿ ಇವೆಲ್ಲವೂ ಜಾನಪದ ಸಂಸ್ಕೃತಿಯನ್ನೊಳಗೊಂಡ ಆಟಗಳು. ಆಧುನಿಕ ಭರಾಟೆಯಲ್ಲಿ ಇವೆಲ್ಲವೂ ಕಣ್ಮರೆಯಾಗುತ್ತಿವೆ. ಜಾನಪದ ಪರಿಷತ್ ಇವೆಲ್ಲವನ್ನೂ ಮತ್ತೆ ಹೆಕ್ಕಿ ಮುನ್ನೆಲೆಗೆ ತರಬೇಕಾಗಿದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಭಾನುಮತಿ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ವಿವಿಧ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ರಾಮನಗರ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕೆ.ಸಿ.ಶಾಂತಪ್ಪ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ತಾಲೂಕು ಅಧ್ಯಕ್ಷೆ ಭಾನುಮತಿ, ಟಿ.ಕಮಲಾಕ್ಷಮ್ಮ, ಸವಿತಾ ಸತ್ಯನಾರಾಯಣ, ಶಾರದಮ್ಮ, ಲೀಲಾವತಿ, ನವ್ಯಶ್ರೀ ಕೆವಿಯಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net