

ಬೀದರ್: ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಜಾನಪದ ಕಲೆಯನ್ನು ಉಳಿಸುವ ಮೂಲಕ ಹೆಚ್ಚು ಪಸರಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಅಭಿಪ್ರಾಯ ಪಟ್ಟರು.
ಕರ್ನಾಟಕ ಸಾಹಿತ್ಯ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಸಹಯೋಗದಡಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಜಾನಪದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನಕ್ಷರಸ್ಥರು ತಮ್ಮ ಅನುಭವ, ಶ್ರಮದ ಬದುಕು, ಅದರ ಸೌದರ್ಯವನ್ನು ಗೀತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದು ಬಾಯಿಯಿಂದ ಬಾಯಿಗೆ ಹರಡಿ ಎಲ್ಲರಿಗೂ ತಲುಪಿರುವುದು ಸುಲಭದ ಮಾತಲ್ಲ ಎಂದರು.
ಇತ್ತೀಚೆಗೆ ಸಿನಿಮಾಗಳಲ್ಲೂ ಜಾನಪದ ಗೀತೆಗಳನ್ನು ಬಳಸಿಕೊಂಡು ಯಶಸ್ವು ಕಂಡಿರುವುದು ಕಾಣಬಹುದು. ಇದರಿಂದ ಜಾನಪದಕ್ಕೆ ಎಷ್ಟು ಶಕ್ತಿ ಇದೆ ಎಂಬುದನ್ನು ಅರಿಯಬಹುದು ಎಂದು ಹೇಳಿದರು.
ಔರಾದ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಅಶೋಕ ಕೋರೆ ಉಪನ್ಯಾಸ ನೀಡಿ, ನಮ್ಮ ಪೂರ್ವಜರು ಶ್ರಮದ ದಣಿವು ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ ಹಾಗೂ ಸಂಗೀತ ಕಲೆಗಳು ಇಂದು ಜಾನಪದ ಕಲಾ ಪ್ರಕಾರಗಳಾಗಿವೆ. ಶ್ರಮ ಸಂಸ್ಕೃತಿಯಿಂದ ಜಾನಪದ ಸ್ಥಾಪಿತವಾಗಿದೆ ಎಂದರು.
ಜಾನಪದ ಕಲೆ ಯಾವ ಕಾಲಘಟ್ಟದಲ್ಲೂ ನಾಶವಾಗದೆ ನಿರಂತರ ಮುಂದುವರಿಯುತ್ತಿದ್ದು, ಅದರ ಸಂರಕ್ಷಣೆಗೆ ಎಲ್ಲರೂ ಬದ್ಧರಾಗಬೇಕಾಗಿದೆ. ದೇಶದಲ್ಲಿ ಶಿಷ್ಟ ಕಲಾವಿದರಿಗೆ ಸಿಕ್ಕಿರುವ ಗೌರವ ಮತ್ತು ಮನ್ನಣೆ ಜಾನಪದ ಕಲಾವಿದರಿಗೆ ದೊರಕುತ್ತಿಲ್ಲ. ಇದಕ್ಕೆ ಹಲವು ಲೋಪಗಳಿದ್ದರೂ ಅದೆಲ್ಲವನ್ನೂ ಬದಿಗೊತ್ತಿ ಕಲೆಯೇ ಜೀವನವನ್ನಾಗಿ ಮುಂದುವರಿಸಿರುವ ಕಲಾವಿದರ ಸೇವೆಯನ್ನು ಶ್ಲಾಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಉಪಾಧ್ಯಕ್ಷ ಪ್ರೊ.ಎಸ್.ಬಿ. ಬಿರಾದಾರ್ ಮಾತನಾಡಿ, ಇಂದಿನ ಮಕ್ಕಳಿಗೆ ಜಾನಪದ ಸಂಸ್ಕೃತಿ ಕುರಿತು ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಹಾಲು ಎಲ್ಲಿಂದ ಬರುತ್ತೆ ಎಂದು ಕೇಳಿದರೆ ಅಂಗಡಿಯಿಂದ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಪೀಳಿಗೆಗೆ ಎಮ್ಮೆ, ಆಕಳು, ಖೌದಿ, ಒರಳು, ಒನಕೆ, ಖಲುಬತ್ತಿ, ಬೀಸುವ ಕಲ್ಲುಗಳಂತಹ ಜಾನಪದ ಪರಿಕರಗಳ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಆರೋಗ್ಯದ ಸದೃಢ ಜತೆಗೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿದಂತಾಗುತ್ತದೆ ಎಂದರು.
ಔರಾದ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಸಂಜೀವಕುಮಾರ ತಾಂದಳೆ, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಿದರು. ಎಸ್.ಬಿ. ಕುಚಬಾಳ, ನಿಜಲಿಂಗಪ್ಪ ತಗಾರೆ, ಪ್ರಕಾಶ ಕನ್ನಾಳೆ, ಧನರಾಜ ಆನೆಕಲೆ ಇತರರಿದ್ದರು.