

ಶಿಕಾರಿಪುರ: ನಮ್ಮದು ಜನಪದ ಸಂಸ್ಕೃತಿ. ಈ ಮಣ್ಣಿನ ಆಚಾರ, ವಿಚಾರ ಸಂಪ್ರದಾಯ, ಸಹಬಾಳ್ವೆ, ಸಹೃದಯತೆಯ ಸಮ್ಮಿಳಿತದ ಸಾಕ್ಷಿರೂಪವೇ ಜನಪದ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಜಾನಪದ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದೊಂದಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಗ್ರಂಥ ಹೇಳುವ ಮಾಹಿತಿಯನ್ನು ಒಂದು ಜನಪದಗೀತೆ ಹೇಳುತ್ತದೆ ಎಂದರು.
ಜನಪದ ಬಾಯಿಂದ ಬಾಯಿಗೆ ಹರಡಿ ಜನಮನ ತಲುಪಿದ ಸಾಹಿತ್ಯ. ಬಹುತೇಕ ಊರುಗಳಲ್ಲಿ ಜನಪದ ಗಾಯಕರಿದ್ದಾರೆ. ಜಾನಪದ ವಿದ್ವಾಂಸರಿದ್ದಾರೆ. ಅವರನ್ನು ಗುರುತಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮತನ ತುಂಬಿದ ಶ್ರೇಷ್ಠ ಕಲೆ ಜನಪದ ಎಂದರು.
ಭಾರತದಲ್ಲಿರುವ ಎಲ್ಲ ಭಾಷೆಗಳಿಗೆ ಜನಪದವೇ ಅಡಿಪಾಯ. ನಾವು ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಹಳೆಯದನ್ನು ಮರೆಯುತ್ತಾ ಹೋದ ಪರಿಣಾಮವಾಗಿ ಅತ್ಯಂತ ಶ್ರೇಷ್ಠವಾದಂತಹ ಜನಪದ ಕಲೆಗಳು ನಾಶವಾಗಿವೆ. ಜನಪದ ಶ್ರೀಮಂತಿಕೆ ನಮ್ಮ ಶ್ರೇಷ್ಠತೆಯ ಹಿಂದಿರುವ ಬಲ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳಿಂದ ನಮ್ಮ ಜನಪದ ಕಲೆಗಳನ್ನು ಉಳಿಸಿ ಬೆಳೆಸಲು ಉತ್ತೇಜನ ನೀಡಿದಂತಾಗಿದೆ. ಜನಪದರ ನಡೆ, ನುಡಿ, ಕಲೆ, ಸಾಹಿತ್ಯ, ಸಂಗೀತ ಅಪೂರ್ವವಾಗಿವೆ ಎಂದರು.
ಬೆಂಗಳೂರಿನ ಜನಪದ ವಿದ್ವಾಂಸ ಡಾ.ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಜನಪದ ಸಾಹಿತ್ಯ ಅಮೃತವಿದ್ದಂತೆ. ಜಾತಿ ಮತಗಳ ತಾರತಮ್ಯವಿಲ್ಲದೆ ಜನಮನದಲ್ಲಿ ನೆಲೆಯಾಗಿರುವುದು ಸಾಹಿತ್ಯ ಮತ್ತು ಸಂಗೀತ. ಜನಪದ ಕಲಾವಿದರಿಗೆ ರಕ್ತಗತವಾಗಿ ಜನಪದ ಕಲೆ ಒಲಿದು ಬಂದಿರುತ್ತದೆ. ಅಂತಹ ಕಲಾವಿದರು ತಮ್ಮ ಮುಂದಿನ ಪೀಳಿಗೆಗೆ ಕಲೆಯನ್ನು ಹಂಚಬೇಕು. ಅದನ್ನು ನಾವು ಪೋಷಿಸಬೇಕು ಎಂದರು.
ನಮ್ಮ ಮುಂದಿನ ಪೀಳಿಗೆಗೆ ಜನಪದ ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿಗಳ ಅರಿವು ಮೂಡಿಸುವ ಕೆಲಸವಾಗಬೇಕು. ಜನಪದ ಕಲಾವಿದರು ಎಲೆಮರೆಯ ಕಾಯಿಯಂತಿದ್ದಾರೆ. ಅವರಿಗೆ ಸೂಕ್ತ ವೇದಿಕೆ ದೊರಕಬೇಕು. ಜನಪದ ಸಾಹಿತ್ಯ ಮನೆ ಮನೆಗೆ, ಮನ ಮನಕ್ಕೆ ತಲುಪಬೇಕು ಎಂದರು.
ಕನ್ನಡ ಜಾನಪದ ಪರಿಷತ್‌ನ ಅಧ್ಯಕ್ಷ ಬಿ.ಪಾಪಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಗಾಯಕರಾದ ಕೆ.ಎಚ್.ಲಕ್ಷ್ಮಣ್, ಮಧುಕೇಶ್ವರ್, ಜೆ.ಗೀತಾ, ಸತ್ಯನಾರಾಯಣ, ಲೋಕೇಶ್, ನಾಗರಾಜಾಚಾರ್, ಶಿವಕುಮಾರ್, ಹಾಲಪ್ಪ ಬೆಳಗುತ್ತಿ ಇತರರಿದ್ದರು.