

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೆಂದ್ರದಲ್ಲಿ ಶ್ರೀ ವಿದ್ಯಾಗಣಪತಿ ರಥೋತ್ಸವ ಅದ್ದೂರಿಯಾಗಿ ಭಾನುವಾರ ಜರುಗಿತು.
ವಿದ್ಯಾರ್ಥಿಗಳು ವಿದ್ಯಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಣ್ಣಬಣ್ಣದ ಚಿತ್ತಾರದೊಂದಿಗೆ ಅಲಂಕಾರ ಮಾಡಿದ ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ, ವಿವಿಧ ವಾದ್ಯಗಳು, ನಂದಿಕೋಲು ಕುಣಿತದೊಂದಿಗೆ ಮೆರವಣಿಗೆ ನಡೆಸಿದರು. ರಥಕ್ಕೆ ಹೂ ಎರಚಿ ಭಕ್ತಿ ಸಮರ್ಪಿಸಿದರು.
ಶಿಶುಮಂದಿರದಿಂದ ಸಾಗಿರ ರಥ, ವಸತಿ ನಿಲಯದ ಮೂಲಕ ದೇಗುಲಕ್ಕೆ ಹಿಂದಿರುಗಿತು. ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು ಅಗತ್ಯವಾಗಿದೆ. ಜಾತ್ರೋತ್ಸವದಿಂದ ಭಕ್ತಿಯ ಜಾಗೃತಿ ಮೂಡುತ್ತದೆ ಎಂದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಶ್ರೀಶೈಲ, ಕಾರ್ಯದರ್ಶಿ ಬಸವನಗೌಡ್ರು, ಶಿಕ್ಷಕರಾದ ದಾನಯ್ಯ, ರೊಟ್ಟಿ ಕೊಟ್ರಪ್ಪ, ಆನಂದ ಕಡ್ಲಿ, ಸಿಬ್ಬಂದಿ ಶಿವರಾಜ, ಜೆಸಿ ಅಧ್ಯಕ್ಷ ದಿವಾಕರಗೌಡ, ಆನೇಕಲ್ಲು ಆರ್.ಎಸ್.ಎಸ್.ಎನ್.ಅಧ್ಯಕ್ಷ ಲಿಂಗರಾಜ, ಗದ್ದಿಕೆರೆಯ ನಾಗಭೂಷಣ, ಡಾ.ವಿನಯಸಿಂಹ ಇತರರಿದ್ದರು.