ಜಾತ್ರೋತ್ಸವ ಸಾಮೂಹಿಕ ಸಮ್ಮಿಲನದ ಕೇಂದ್ರ

25ss1prasivmurty jatre udgatane
Published on

ಶನಿವಾರಸಂತೆ: ಜಾತ್ರೋತ್ಸವ ಧರ್ಮ, ಜಾತಿ ಮತ್ತು ಜನಾಂಗಗಳ ನಡುವೆ ಭೇದಭಾವ ಇಲ್ಲದ ಸಾಮೂಹಿಕ ಸಮ್ಮಿಲನದ ಕೇಂದ್ರ ಎಂದು ವೃತ್ತ ನಿರೀಕ್ಷಕ ಎಸ್.ಪರಶಿವಮೂರ್ತಿ ಅಭಿಪ್ರಾಯಪಟ್ಟರು.

ಗುಡುಗಳಲೆ ಜಾತ್ರಾ ಮೈದಾನದಲ್ಲಿ ಆಯೋಜಿಸಿದ್ದ 79ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರು ಜಾತ್ರೆ ಮತ್ತು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ರೈತರು ಟ್ರಾಕ್ಟರ್, ಟಿಲ್ಲರ್ ಇತರ ಯಂತ್ರೋಪಕರಣಗಳ ಮೂಲಕ ಕೃಷಿ ಮಾಡುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ನಡೆದಿರಲಿಲ್ಲ. ಇದೀಗ ಜಾತ್ರಾ ಸಮಿತಿಯವರು ಮತ್ತೆ ಜಾನುವಾರುಗಳ ಜಾತ್ರೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ಜಾನುವಾರುಗಳ ಸಾಕಣೆ ಕಡಿಮೆ ಆಗುತ್ತಿದೆ. 78 ವರ್ಷ ಹಿನ್ನೆಲೆಯುಳ್ಳ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆ ಸೊರಗುತ್ತಿರುವುದು ವಿಷಾದನೀಯ ಎಂದರು.

ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ರೈತರು ಮನೆಯಲ್ಲಿ ಎತ್ತು, ಹಸುಗಳು ಇದ್ದವು. ಆದರೆ ಪ್ರಸ್ತುತ ಇವುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದ ಅವರು, ಲಿಂಗೈಕ್ಯ ಶಿವಕುಮಾರ ಶ್ರೀಗಳು ಜ್ಞಾನ, ದಾಸೋಹ ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದರು. ಶ್ರೀಗಳ ಪುಣ್ಯ ಸ್ಮರಣೆ ದಿನದಂದು ಇಲ್ಲಿ ಜಾನುವಾರು ಜಾತ್ರೆಗೆ ಚಾಲನೆಯಾಗಿರುವುದು ಪುಣ್ಯದ ಕಾರ್ಯ ಎಂದರು.

ವೇದಿಕೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ, ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಹಾಜರಿದ್ದರು.

ಶ್ರಿಗಳ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದಿಂದ ಶ್ರೀಗಳ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಗುಡುಗಳಲೆ ಜಂಕ್ಸನ್‌ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಾನುವಾರುಗಳನ್ನು ಪೂಜಿಸಿದ ಬಳಿಕ ದೇವರನ್ನು ಅಡ್ಡಪಲ್ಲಕಿಯಲ್ಲಿ ಕೂರಿಸಿ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬಸವೇಶ್ವರ ದೇವಾಲಯ ಬಳಿ ಸಮಾಪ್ತಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net