

ಕುಶಾಲನಗರ: ಕುಶಾಲನಗರದ ಶ್ರೀ ಮಹಾಗಣಪತಿ ರಥೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ರೆ ಈ ಬಾರಿ ಕಳೆಗಟ್ಟಿದೆ.
ಕರೊನಾ ಕಾರಣಕ್ಕೆ 2 ವರ್ಷ ಸರಳವಾಗಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಈಗ ಸಂಭ್ರಮ ಎದ್ದು ಕಾಣುತ್ತಿದೆ. ಪ್ರತಿ ದಿನ ನಡೆಯುತ್ತಿರುವ ವೈವಿಧ್ಯಮಯ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ.
ರಥೋತ್ಸವ ನಂತರ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಭರತನಾಟ್ಯ, ಕವಿಗೋಷ್ಠಿ, ಹಾಡು, ನೃತ್ಯ, ಮಿಮಿಕ್ರಿ, ರಸಮಂಜರಿ, ಜಾದು ಪ್ರದರ್ಶನ, ಅಂತ್ಯಾಕ್ಷರಿ, ರ‌್ಯಾಪ್ ಸಂಗೀತ ಹೀಗೆ ಪ್ರತಿ ದಿನ ವೇದಿಕೆಯಲ್ಲಿ ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿವೆ. ಶುಕ್ರವಾರ ರಾತ್ರಿ ಕಲಾವಿದ ಟಿ.ಆರ್.ಪ್ರಭುದೇವ್ ಜಾದು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಭರತನಾಟ್ಯ ಪ್ರದರ್ಶನ: ಮೈಸೂರಿನ ನೃತ್ಯ ವಿದ್ಯಾಪೀಠ ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು. ವಿದುಷಿ ಅನಿತಾ ಮತ್ತು ಶೋಭಾ ನೇತೃತ್ವದಲ್ಲಿ 18 ವಿದ್ಯಾರ್ಥಿಗಳು ಪ್ರದರ್ಶನ ನೀದರು.