

ಕೆ.ಆರ್.ಸಾಗರ: ಜಾತ್ರೆಗಳು ನಡೆಯುವುದು ಒಂದು ಉತ್ತಮ ಪದ್ಧತಿ. ಹಿರಿಯರ ಮಾರ್ಗದರ್ಶನದಲ್ಲಿ ಸಂಪ್ರದಾಯಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ಉಪ್ಪರಿಕೆ ಶ್ರೀಬಸವೇಶ್ವರ ದೇವಸ್ಥಾನದ ಜಾತ್ರಾ ಮಾಳದಲ್ಲಿ ನೂತನವಾಗಿ ನಿರ್ಮಿಸಿರುವ ಉಪ್ಪರಿಗೆ ಶ್ರೀ ಬಸವೇಶ್ವರ ರಂಗಮಂಟಪ ಮತ್ತು ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ನಮ್ಮ ತಾಲೂಕಿನಲ್ಲಿ ದನಗಳ ಜಾತ್ರೆ ನಡೆಯುವುದು ಇದೊಂದೇ ಕಡೆ. ಈ ಬಾರಿ ಅನಿವಾರ್ಯ ಕಾರಣದಿಂದ ಜಾತ್ರೆ ನಡೆಯುತ್ತಿಲ್ಲ. ಜಾತ್ರೆ ನಡೆಯುವ ಮಾಳ ಅಭಿವೃದ್ಧಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದನಗಳಿಗೆ ಹರಡುತ್ತಿರುವ ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ಈ ಬಾರಿ ಕೆ.ಆರ್. ಸಾಗರದ ಸಮೀಪದ ಉಪ್ಪರಿಕೆ ಶ್ರೀ ಬಸವೇಶ್ವರ ದನಗಳ ಜಾತ್ರೆ ರದ್ದು ಮಾಡಲಾಗಿತ್ತು. ಕೇವಲ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ಸಲ್ಲಿಸಿ ಅಲಂಕರಿಸಿ ಪೂಜೆ ಮಾಡಲಾಯಿತು. ಉತ್ಸವ ಮೂರ್ತಿಯ ಮೆರವಣಿಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿತು. ಗ್ರಾಮದಲ್ಲಿ ಭಕ್ತರು ಹೂ-ಹಣ್ಣು ನೀಡಿ ಪೂಜೆ ಸಲ್ಲಿಸಿದರು.
ಉಪ್ಪರಿಕೆ ಶ್ರೀ ಬಸವೇಶ್ವರ ಜಾತ್ರಾ ಸಮಿತಿ ಕಾರ್ಯದರ್ಶಿ ಎಂ.ಬಿ. ಕುಮಾರ್, ಅಧ್ಯಕ್ಷರಾದ ವಿಷಕಂಠೇಗೌಡ, ಗೌರವ ಅಧ್ಯಕ್ಷರಾದ ಹಾಲೇಗೌಡ, ಕೆ.ಆರ್. ಸಾಗರ ಗ್ರಾಪಂ ಅಧ್ಯಕ್ಷ ಕೆ. ನರಸಿಂಹ , ಜಾತ್ರಾ ಸಮಿತಿ ಉಪಾಧ್ಯಕ್ಷ ಎಚ್.ಎಸ್.ರಾಮು, ಖಜಾಂಚಿ ಮಲ್ಲೇಶ್, ಶ್ರೀರಂಪಗಟ್ಟಣ ತಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಜಂಟಿ ಕಾರ್ಯದರ್ಶಿ ವಿನೋದ್‌ಕುಮಾರ್, ರಾಘವೇಂದ್ರ, ನಿರ್ದೇಶಕರಾದ ಕೆಂಪಸಿಂಗೇಗೌಡ, ಪ್ರಭಾಕರ್ ಇತರರು ಇದ್ದರು.