

ಅಥಣಿ ಗ್ರಾಮೀಣ: ಧರ್ಮ, ಸಂಸ್ಕೃತಿ, ಉತ್ಸವ, ಜಾತ್ರೆ, ಹಬ್ಬಗಳು ದೇಶದ ಉಸಿರಾಗಿದ್ದು, ಎಷ್ಟೇ ಬಡತನ, ಕಷ್ಟ ಬಂದರೂ ಆಚರಣೆ ಮಾಡುವ ಮೂಲಕ ಇನ್ನೂ ಹಸಿರಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಕಮರಿ ಶ್ರೀ ಅಮ್ಮಾಜೇಶ್ವರಿ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿ, ಅಮ್ಮಾಜೇಶ್ವರಿ ದೇವಿಗೆ ಪುರಾತನ ಇತಿಹಾಸವಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲ ಸೇರಿ ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎತ್ತಿನ ಬಂಡಿ, ವಾಹನ ಹಾಗೂ ಕಾಲ್ನಡಿಗೆ ಮೂಲಕ ಝುಂಜರವಾಡ ಕೃಷ್ಣಾ ನದಿ ದೇವಿ ಸ್ನಾನಕ್ಕೆ ಹೋಗುವುದು ವಾಡಿಕೆ. ಇಂತಹ ಪರಂಪರೆ ಹೊಂದಿರುವ ದೇವಿ ಮಜ್ಜನ ಕಾರ್ಯದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ. ಈ ವರ್ಷ ಕೃಷ್ಣಾ ನದಿಯಲ್ಲಿ ನೀರು ಬತ್ತಿದ್ದರಿಂದ ೪-೫ ಸಾವಿರ ಭಕ್ತರ ಸ್ನಾನಕ್ಕೆ ಅನುಕೂಲವಾಗುವಂತೆ ೦.೧೫ ಟಿಎಂಸಿ ನೀರು ಬಿಡಲಾಗಿದೆ ಎಂದರು.
ಉದ್ಯಮಿ ಸದಾಶಿವ ಬುಟಾಳಿ ಹಾಗೂ ಅರ್ಚಕ ಜಯಪ್ಪ ಪೂಜಾರಿ ಮಾತನಾಡಿದರು. ಮೊದಲು ಅಮ್ಮಾಜೇಶ್ವರಿ ಮೂರ್ತಿಯನ್ನು ಕೃಷ್ಣಾ ನದಿಯಲ್ಲಿಟ್ಟು ಗಂಗಾ ಸ್ನಾನ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಕಕಮರಿ ಗ್ರಾಮಸ್ಥರೆಲ್ಲ ಸೇರಿ ಕೃಷ್ಣಾ ನದಿ ದಡದದಲ್ಲಿಯೇ ದೇವಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಅಪ್ಪಾಸಾಹೇಬ ಪಾಟೀಲ, ಈರಣ್ಣ ವಾಲಿ, ಸಿದ್ರಾಮ ಬಿಳ್ಳೂರ, ಪ್ರದೀಪ ಕರಡಿ, ಅಮೋಘ ಒಡೆಯರ, ಸಿಂಕದರ ಮುಜಾವರ, ಶೀತಲಗೌಡ ಪಾಟೀಲ, ಅಣ್ಣಪ್ಪ ತಂಗಡಿ ಇತರರಿದ್ದರು.