ಜಾತ್ರೆ, ಉತ್ಸವಗಳು ಭಾರತೀಯ ಸಂಸ್ಕೃತಿಯ ಪ್ರತೀಕ

Narasimha Swamy Jathre
Published on

ಚಿತ್ರದುರ್ಗ: ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆ ಮತ್ತು ಉತ್ಸವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ದೇಶದ ಪ್ರತೀಕವಾಗಿವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೇಗುಂಟನೂರು ಹೋಬಳಿಯ ಕಲ್ಕುಂಟೆ ಗ್ರಾಮದ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಮಹೋತ್ಸವದಲ್ಲಿ ಸಂಭ್ರಮ ಇಮ್ಮಡಿಗೊಳ್ಳಲು ಭಕ್ತರೇ ಕಾರಣ. ನಾಯಕ ಸಮುದಾಯದಲ್ಲಿ 600ಕ್ಕೂ ಅಧಿಕ ಬೆಡಗುಗಳಿವೆ. ನಮ್ಮಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಹೆಚ್ಚಿನದಾಗಿ ಕಾಣಬಹುದು ಎಂದರು.

ನಾಯಕ ಸಮುದಾಯದಲ್ಲಿ 48 ಬುಡಕಟ್ಟುಗಳಿವೆ. ಪರಿಶಿಷ್ಟ ಪಂಗಡದ 15 ಶಾಸಕರು ರಾಜ್ಯದಲ್ಲಿ ಆಯ್ಕೆಯಾಗುವ ಮೂಲಕ ಸಮಾಜಕ್ಕೆ ಶಕ್ತಿ ಬಂದಿದೆ. ಮೀಸಲಾತಿ ಹೆಚ್ಚಳದ ಪರಿಣಾಮ 7ರಿಂದ 8 ಮಂದಿಗೆ ವೈದ್ಯಕೀಯ ಸೀಟು ಲಭ್ಯವಾಗುತ್ತಿದೆ. 3 ದಶಕಗಳಿಂದ ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದು, ಮೀಸಲು ಹೋರಾಟದಿಂದ ಸಾಕಷ್ಟು ಅನುಕೂಲವಾಗಿದೆ. ಇದಕ್ಕೆ ಸಂಘಟನೆಯೂ ಕಾರಣ ಎಂದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲೇ ಜಾತಿ ವ್ಯವಸ್ಥೆ ಹೆಚ್ಚಿದೆ. ಅದನ್ನು ನಿರ್ಮೂಲನೆ ಮಾಡಲು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ. ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಮ್ಮ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬುಡಕಟ್ಟು ವಿವಿ ಸ್ಥಾಪಿಸಲು ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಅಲ್ಲದೆ, ಕಿತ್ತೂರು, ಹಂಪಿ ಉತ್ಸವ ಮಾದರಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ದುರ್ಗೋತ್ಸವ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಸಂಸ್ಕೃತಿಗಳ ತವರು. ಅಹೋಬಲ ನರಸಿಂಹಸ್ವಾಮಿ ದೇಗುಲ ಕಲ್ಕುಂಟೆಯಲ್ಲಿರುವುದು ನನಗೆ ಸಂತಸ ತಂದಿದೆ. ಸ್ವಾಮಿಯ ಕೃಪೆಯಿಂದ ಈ ಬಾರಿ ಉತ್ತಮ ಮಳೆ ಬೆಳೆಯಾಗಲಿ ಎಂದು ಇದೇ ವೇಳೆ ಪ್ರಾರ್ಥಿಸಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಅಹೋಬಲ ನರಸಿಂಹಸ್ವಾಮಿ ದೇವರಿಗೆ ನಡೆದುಕೊಳ್ಳುವವರ ಸಂಖ್ಯೆ ಅಧಿಕ. ಬುಡಕಟ್ಟು ಸಂಪ್ರದಾಯಗಳು ಭಕ್ತಿಯಿಂದ ನಡೆಯುತ್ತದೆ. ಯಾವ ಅದ್ದೂರಿ, ಆಡಂಬರ ಇಲ್ಲದೆ, ಸಮುದಾಯದವರು ಶೋಷಣೆ ರಹಿತವಾಗಿ ಸ್ವಾಮಿಯ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಮುಖಂಡರಾದ ತಿಪ್ಪೇಸ್ವಾಮಿ, ಶ್ರೀನಿವಾಸ್, ಶೇಖರಪ್ಪ, ಮದ್ದಣ್ಣ, ಹಳದರ ತಿಪ್ಪೇಸ್ವಾಮಿ, ವಕೀಲ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net