

ಕಂಪ್ಲಿ: ವೀರಶೈವ ಮಠಗಳು ಶಿಕ್ಷಣ, ಅನ್ನ, ನೆರಳು ನೀಡುವ ಮೂಲಕ ಜನರನ್ನು ಸುಶಿಕ್ಷಿತರು ಹಾಗೂ ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ಮುಂಚೂಣಿಯಲ್ಲಿವೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ತಾಲೂಕು ವೀರಶೈವ ಸಂಘದಿಂದ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಬುಧವಾರ ಮಾತನಾಡಿದರು. ಬಸವ ಜಯಂತಿಯನ್ನು ಜಾತ್ಯತೀತವಾಗಿ ಆಚರಿಸಬೇಕಿದೆ. ಪಟ್ಟಣದಲ್ಲಿ ಬಸವೇಶ್ವರ ವೃತ್ತ, ವೀರಶೈವ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಬಸವಣ್ಣ ಅವರ ವಿಚಾರಧಾರೆ ಕುರಿತು ಉಪನ್ಯಾಸ ನೀಡಿ, ಬಸವೇಶ್ವರ ಅವರು ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆ, ಜಾತೀಯತೆ, ವೃತ್ತಿ ತಾರತಮ್ಯತೆ ತೊಲಗಿಸಿ ಸಮ ಸಮಾಜ ನಿರ್ಮಾಣಕ್ಕೆ ಜೀವನಪೂರ್ತಿ ಶ್ರಮಿಸಿದ್ದಾರೆ. ಬಸವಣ್ಣ ಅವರ ವಚನ ಸಾಹಿತ್ಯ, ತತ್ವಾದರ್ಶಗಳು ಜಗತ್ತಿಗೆ ಮಾದರಿಯಾಗಿವೆ ಎಂದರು.
ಡಾ.ಬಿ.ಸುನೀಲ್ ಅವರಿಗೆ ಶರಣ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಬಸವೇಶ್ವರ ಪ್ರತಿಮೆ ಮೆರವಣಿಗೆ ನಡೆಯಿತು. ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಭಟ್ಟ ಪ್ರಸಾದ್, ಅರವಿ ಬಸವನಗೌಡ, ಡಾ.ಎ.ಸಿ.ದಾನಪ್ಪ, ಎಚ್.ನಾಗರಾಜ, ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಮುಕ್ಕುಂದಿ ಶಿವಗಂಗಮ್ಮ, ಎಲಿಗಾರ ವೆಂಕಟರೆಡ್ಡಿ, ಎಸ್.ಎಂ.ನಾಗರಾಜ, ಬಿ.ವಿ.ಗೌಡ, ಚಂದ್ರಶೇಖರಗೌಡ, ಕನಕಗಿರಿ ರೇಣುಕಪ್ಪ, ಹೊಸಕೋಟೆ ಜಗದೀಶ, ಸಿ.ಆರ್.ಹನುಮಂತ, ಬಿ.ನಾರಾಯಣಪ್ಪ ಇತರರಿದ್ದರು.