ಜಾತ್ಯತೀತ ಜನತಾದಳದ ಮುಖವಾಡ ಬಹಿರಂಗವಾಗಿದೆ

Published on

ಮೈಸೂರು: ಮೈಸೂರುನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಮುಖವಾಡ ಬಹಿರಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.
ಹೆಸರಿಗೆ ಮಾತ್ರ ಜಾತ್ಯತೀತ ಪದ ಇಟ್ಟುಕೊಂಡು ಕೋಮುವಾದಿ ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸಿರುವುದರಿಂದ ಜೆಡಿಎಸ್‌ನ ನೈತಿಕತೆಯನ್ನು ಪ್ರಶ್ನಿಸಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕಾರಣ ಯಾವ ಸೈದ್ಧಾಂತಿಕ ನೆಲೆಗಟ್ಟು ಇಲ್ಲದೆ ಅಧಿಕಾರ ದಾಹದಿಂದ ಯಾರ ಜೊತೆ ಬೇಕಾದರೂ ಕೈಜೋಡಿಸುತ್ತಾರೆ ಎಂಬುದಕ್ಕೆ ಈ ಪಾಲಿಕೆ ಚುನಾವಣೆಯೇ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಬೆಂಬಲದಿಂದ ಎಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದರೆ, ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಅನ್ನೇ ಟೀಕಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲ ಪಡೆದು ಅಧಿಕಾರ ಪಡೆದಿದ್ದರೂ ಅವರಿಗೆ ಅಧಿಕಾರ ಹಸ್ತಾಂತರಿಸದೆ ದ್ರೋಹ ಬಗೆದವರು. ಯಾವ ಸಿದ್ಧಾಂತವಿಲ್ಲದ ಕುಮಾರಸ್ವಾಮಿ ಅವರ ಜಾತ್ಯತೀತತೆಯನ್ನು ನಂಬಲು ಸಾಧ್ಯವೇ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತ ಮಹಿಳೆಗೆ ಉಪಮೇಯರ್ ಅಭ್ಯರ್ಥಿ ಎಂದು ಘೋಷಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡದೆ ಅವಮಾನ ಮಾಡಿ ಬಿಜೆಪಿಗೆ ಉಪ ಮೇಯರ್ ಸ್ಥಾನ ಸಿಗುವಂತೆ ಮಾಡುವ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಮತ್ತೆ ಯಾವ ತಂತ್ರ- ಕುತಂತ್ರವನ್ನು ಮಾಡುವರೋ ಎಂಬುದನ್ನು ಜನತೆ ತಿಳಿದುಕೊಳ್ಳ ಬೇಕಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net