ಜಾತ್ಯತೀತ ನಿಲುವಿಗೆ ಕೈಜೋಡಿಸಿ

13 ckm 1 web
Published on

ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಾತ್ಯತೀತ, ಪ್ರಗತಿಪರ ಎಡಪಕ್ಷಗಳೊಂದಿಗೆ ಸೇರಿ ಸಿಪಿಐ ರಾಜಕೀಯ ಹೋರಾಟ ಮುಂದುವರಿಸಿ ಬಿಜೆಪಿಯನ್ನು ಸೋಲಿಸುವ ಅಗತ್ಯವಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.  13ನೇ ಸಿಪಿಐ ಜಿಲ್ಲಾ ಸಮ್ಮೇಳನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದರು. ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆ, ನಿವೇಶನ ಮತ್ತು ವಸತಿ, ಉದ್ಯೋಗ ಭದ್ರತೆಗಾಗಿ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕ ಜಾರಿ, ಆಹಾರ ಭದ್ರತೆಗಾಗಿ ಪಡಿತರ ವ್ಯವಸ್ಥೆ ಬಲಿಪಡಿಸುವುದು ಸೇರಿದಂತೆ ಜನಪರ 6 ಅಂಶಗಳನ್ನು ಮುಂದಿಟ್ಟು ದೇಶಾದ್ಯಂತ ಹೋರಾಟ ಮಾಡಲು ಪಕ್ಷ ಕರೆ ನೀಡಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಕ್ಟೋಬರ್​ನಲ್ಲಿ ನಡೆಯುವ ಪಕ್ಷದ ಮಹಾಧಿವೇಶನದಲ್ಲಿ ಈ ಬಗ್ಗೆ ನಿರ್ಣಯಿಸಲಾಗುತ್ತದೆ. ಆ ಸಂದರ್ಭ ಜಿಲ್ಲೆಯಲ್ಲೂ ಹೋರಾಟ ಕೈಗೆತ್ತಿಕೊಂಡು ಬಡಜನರಿಗೆ ನ್ಯಾಯ ಒದಗಿಸಬೇಕೆಂದು ಹೇಳಿದರು.

ಬಿಜೆಪಿ ಸರ್ಕಾರದ ಆರ್ಥಿಕ ನೀತಿ ಶ್ರೀಮಂತರ ಪರವಾಗಿದೆ. ಕಾಪೋರೇಟ್ ಕಂಪನಿಗಳ ಮಾಲೀಕರು ಬಿಜೆಪಿ ಆಡಳಿತಾವಧಿಯಲ್ಲಿ ಜಗತ್ತಿನ ಶ್ರೀಮಂತರಾಗುತ್ತಿದ್ದಾರೆ. ಕರೊನಾ ಕಾರಣಕ್ಕೆ ಮೂರ್ನಾಲ್ಕು ವರ್ಷದಿಂದ ಜನ ಸಂಕಷ್ಟದಲ್ಲಿದ್ದಾರೆ. ಕೈಗಾರಿಕೆಗಳು ಮುಚ್ಚಿವೆ. ಲಕ್ಷಾಂತರ ಕಾರ್ವಿುಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಇವರ ಆಸ್ತಿ ಮಾತ್ರ ಹೆಚ್ಚಾಗುತ್ತಲೇ ಇದ್ದು ಗಣಿ, ರೈಲ್ವೆ, ಎಲ್​ಐಸಿ, ವಿಮಾನ, ಕಲ್ಲಿದ್ದಲೂ ಸೇರಿದಂತೆ ಬಿಜೆಪಿ ಆರ್ಥಿಕ ನೀತಿಯಲ್ಲಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದರು.

ಕೃಷಿ ಜಮೀನನ್ನು ಕಂಪನಿಗಳಿಗೆ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಜಾರಿ ಮಾಡಿತು. ಆದರೆ ಜನ ಹೋರಾಡಿ ಅದನ್ನು ತಡೆದರು. ಬಿಜೆಪಿ ಸರ್ಕಾರ ಸಂಪತ್ತನ್ನು ಶ್ರೀಮಂತರ ಕೈಗೆ ಕೊಟ್ಟು ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದ ಆರ್ಥಿಕ ನೀತಿ ವಿರುದ್ಧ ಹೋರಾಡುವ ಮೂಲಕ ಜನರ ಸಂಪತನ್ನು ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net