

ಚಾಮರಾಜನಗರ: ರಾಜ್ಯದಲ್ಲಿ ಸೆ.22 ರಿಂದ ಅ.9 ರವರೆಗೆ ನಡೆಯುವ ಜಾತಿ ಗಣತಿ ಸಮೀಕ್ಷೆಯಲ್ಲಿ ಉಪ್ಪಾರ ಸಮುದಾಯದ ಎಲ್ಲಾ ಉಪಜಾತಿಯವರು ಜಾತಿ ಕಾಲಂನಲ್ಲಿ ಉಪ್ಪಾರ ಎಂದು ನಮೂದಿಸಬೇಕು ಎಂದು ಚಾಮರಾಜನಗರ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಮನವಿ ಮಾಡಿದರು.
ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸುಮಾರು 30-40 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾತಿ ಗಣತಿ ಸಮೀಕ್ಷೆಗೆ ತೀರ್ಮಾನಿಸಿದ್ದು, ಈ ಸಂದರ್ಭದಲ್ಲಿ ಕಾಲಂ ನಂ.9 ರಲ್ಲಿ ಉಪ್ಪಾರ ಎಂದು ನಮೂದು ಮಾಡುವ ಮೂಲಕ ಸಮುದಾಯದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ದಾಖಲು ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಪ್ಪಾರ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಕುಲಶಾಸೀಯ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು ವರ್ಷಗಳ ಹೋರಾಟದ ಲವಾದ ಕುಲ ಶಾಸ್ತ್ರೀಯ ಅಧ್ಯಯನ ವರದಿಯನ್ನು ಸಚಿವ ಸಂಪುಟದಲ್ಲಿ ಇಟ್ಟು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅದರಂತೆ ಕೇಂದ್ರಕ್ಕೆ ಆದಷ್ಟು ಬೇಗ ಶಿಾರಸ್ಸು ಮಾಡಬೇಕು. ರಾಜ್ಯದಲ್ಲಿ ಹೆಸರಿಗೆ ಮಾತ್ರ ಉಪ್ಪಾರ ಅಭಿವೃದ್ಧಿ ನಿಗಮವಿದ್ದು, ಕೂಡಲೇ ಅದಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು. ಸುಮಾರು 200 ಕೋಟಿ ರೂ, ಅನುದಾನವನ್ನು ನೀಡುವ ಮೂಲಕ ಕಾಯಕ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಮಹದೇವಸ್ವಾಮಿ, ಉಪಾಧ್ಯಕ್ಷ ಮಹಾದೇವಶೆಟ್ಟಿ, ನಿರ್ದೇಶಕ ಕೆಂಪನಪುರ ಮಹದೇವಶೆಟ್ಟಿ ಹಾಜರಿದ್ದರು.