ಜಾತಿವಾದಿಗಳಿಂದ ಹಿಂದು ಧರ್ಮಕ್ಕೆ ಅಪಾಯ

Swamiji
Published on

ಚಿತ್ರದುರ್ಗ: ಹಿಂದು ಧರ್ಮದ ಅವನತಿಗೆ ಕೇವಲ ಕ್ರೈಸ್ತರು, ಇಸ್ಲಾಂ ಧರ್ಮದವರಷ್ಟೆ ಕಾರಣರಲ್ಲ. ಹಿಂದುಗಳಲ್ಲಿನ ಕೆಲ ಜಾತಿವಾದಿಗಳಿಂದಲೂ ಧರ್ಮಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಬೇಸರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಸಿದ್ಧಾಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾನಾಯಕ ದಲಿತ ಸೇನೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಯಾರು ಪಡೆಯದಷ್ಟು ಪದವಿ ಪಡೆದು ದೇಶದಲ್ಲೇ ಉನ್ನತ ಹುದ್ದೆ ಅಲಂಕರಿಸಿದರು. ಆದರೆ, ಜನರಿಂದ ಕಿರುಕುಳ ತಾಳದೆ, ಮತ್ತೆ ಮುಂಬೈಗೆ ಹಿಂದಿರುಗಿದರು ಎಂದರು.

ಕೇವಲ ದಲಿತರೆನ್ನುವ ಕಾರಣಕ್ಕೆ ಅಂಬೇಡ್ಕರ್ ಜೀವನದಲ್ಲಿ ಸಾಕಷ್ಟು ನೋವು, ಹಿಂಸೆ, ಅವಮಾನ, ಅಸ್ಪಶ್ಯತೆ ಅನುಭವಿಸಿದರು. ಹೀಗಾಗಿ ಹಿಂದು ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದರು.

ಸರ್ವರೂ ಸಮಾನತೆಯಿಂದ ಬದುಕಲು ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಅವರನ್ನು ಪ್ರತಿ ಮನೆಯಲ್ಲೂ ಪೂಜಿಸಬೇಕು. ಅವರ ತತ್ವಾದರ್ಶ ಮೈಗೂಡಿಸಿಕೊಂಡಾಗ ದೇಶದಲ್ಲೇ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ತಾಲೂಕಿನ ನರಸೀಪುರ ಗ್ರಾಮದ ತಿರುಮಲ ದೇಗುಲದೊಳಗೆ ದಲಿತ ಯುವಕ ಪ್ರವೇಶಿಸಿದ ಕಾರಣಕ್ಕೆ ಎರಡು ದಿನಗಳಿಂದಲೂ ಅಲ್ಲಿ ಪೂಜೆ ಮಾಡಿಲ್ಲ ಎನ್ನುವುದಾದರೆ, ಇದ್ಯಾವ ನ್ಯಾಯ ಎಂದು ಸ್ವಾಮೀಜಿ ಪ್ರಶ್ನಿಸಿದರು.

ಮಹಾನಾಯಕ ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ತಾಳಿಕೆರೆ, ಪದಾಧಿಕಾರಿಗಳಾದ ಹೊಳೆಯಪ್ಪ ಕೆ.ಸಾಕ್ಯ, ದುರುಗೇಶ್, ಲೋಕೇಶ್, ಗ್ರಾಮದ ಮುಖಂಡರಾದ ಅಂಜಿನಪ್ಪ, ಜಗದೀಶ್, ಪ್ರಭುಲಿಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net