

ಮೈಸೂರು: ಹಿಂದುಳಿದ ವರ್ಗ ಹಾಗೂ ಶೋಷಿತ ಸಮುದಾಯದ ನಾಯಕರ ಚಾರಿತ್ರ್ಯಹರಣ ಮಾಡುತ್ತಿರುವ ಜಾತಿವಾದಿಗಳನ್ನು ತಳ ಸಮುದಾಯಗಳು ಅರಿತುಕೊಳ್ಳಬೇಕು. ಅಂತಹವರ ಬಗ್ಗೆ ಅಹಿಂದ ಸಮುದಾಯಗಳು ಎಚ್ಚರವಾಗಿರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನಕದಾಸರ ನೌಕರರ ಸಂಘದ ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದ ವತಿಯಿಂದ ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿವಾದಿಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾರಿತ್ರ್ಯಹರಣ ಮಾಡುವ ಹುನ್ನಾರ ನಡೆಯುತ್ತಿದ್ದು, ಅಹಿಂದ ವರ್ಗಗಳು ಎಚ್ಚೆತ್ತುಕೊಳ್ಳಬೇಕಿದೆ.
ಸಿದ್ದರಾಮಯ್ಯ ಅವರು ಮತ್ತು ನಾನು ರಾಜ್ಯಾದಂತ ಕನಕ ಜಯಂತಿ ಆಚರಣೆ ಆರಂಭಿಸಿದ್ದೆವು. ಇದರ ಜತೆಗೆ ಅಹಿಂದ ಸಂಘಟಿಸೋಣ ಎಂದು ತೀರ್ಮಾನಿಸಿ ಅಹಿಂದ ವರ್ಗಗಳನ್ನು ಒಗ್ಗೂಡಿಸಲಾಯಿತು. ಕನಕದಾಸರ ಆಶಯವೂ ಇದೆ ಆಗಿತ್ತು ಎಂದು ಹೇಳಿದರು.
ಸಮಾನತೆ, ಮಾನವ ಹಕ್ಕುಗಳು ತಳಹದಿಯ ಮೇಲೆ ಸಮಾಜ ನಿರ್ಮಾಣವಾಗಬೇಕು ಎಂಬುದು ಕನಕದಾಸರ ಸಂದೇಶವಾಗಿದೆ. ಇಂದು ರಾಜ್ಯದ ಮೂಲೆ ಮೂಲೆಯಲ್ಲಿ ಕನಕದಾಸರ ವಿಚಾರ ಹರಡುವ ಕೆಲಸವಾಗುತ್ತಿದ್ದರೂ, ಜಾತಿ ಹೆಸರಿನಲ್ಲಿ ಭೆದ ಭಾವ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಬೇಸರ ಹೊರಹಾಕಿದರು.
ಶಾಸಕ ಕೆ.ಹರೀಶ್‌ಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ, ರಾಜ್ಯ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಹುಣಸೂರಿನ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ಡಾ.ಪಿ.ಎಸ್.ಲೋಹಿತ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಹಿರಿಯ ಕಾರ್ಮಿಕ ಮುಖಂಡ ಎಂ.ಮಲ್ಲಯ್ಯ, ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್, ಸಂಘದ ಅಧ್ಯಕ್ಷ ಜವರೇಗೌಡ ಸೇರಿದಂತೆ ಇನ್ನಿತರರು ಇದ್ದರು.