

ಬೇಲೂರು: ಕನಕ ದಾಸರ 535ನೇ ಜಯಂತೋತ್ಸವವು ಕೆಆರ್ ನಗರದ ಕನಕ ಗುರು ಪೀಠ ಶಾಖಾ ಮಠದ ಶ್ರೀಶಿವಾನಂದ ಪುರಿ ಸ್ವಾಮೀಜಿಗಳ ನೇತೃತ್ವ ಹಾಗೂ ದಿವ್ಯ ಸಾನಿಧ್ಯದಲ್ಲಿ ಸಮಾಜದ ನೂರಾರು ಬಂದುಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಯಗಚಿ ಸೇತುವೆ ಸಮೀಪದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆಗೆ ಚಾಲನೆ ನೀಡಿದ ಶ್ರೀಶಿವಾನಂದ ಪುರಿ ಸ್ವಾಮೀಜಿಗಳು ಮತ್ತು ಗಣ್ಯರು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕನಕ ಭವನ ನಿರ್ಮಾಣಕ್ಕಾಗಿ ಮೀಸಲಾದ ನಿವೇಶನದವರೆಗೂ ಮೆರವಣಿಗೆ ನಡೆಸಿ ಸಮಾಜದ ಗಣ್ಯರು ಮತ್ತು ಸಾಧನೆಗೈದ ಪ್ರಮುಖರಿಗೆ ಸನ್ಮಾನಿಸಲಾಯಿತು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ನಿರ್ಮಿಸಬೇಕು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕೆಂದು ಹೋರಾಟ ಮಾಡಿ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾದರು. ಆದರೆ ಅದನ್ನೂ ಯಾರೂ ಅಷ್ಟಾಗಿ ಪಾಲಿಸಲಿಲ್ಲ. ಆದರೆ 15ನೇ ಶತಮಾನದಲ್ಲಿ ಕನಕ ದಾಸರು ತಮ್ಮ ಕೀರ್ತನೆಗಳ ಮೂಲಕವೇ ಅಂದು ಮನೆ ಮಾಡಿದ್ದ ಅನಿಷ್ಟಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಿ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂದಾದರು. ಅಲ್ಲದೆ ಅವರು ದಾಸ ಸಾಹಿತ್ಯದ ಮೂಲಕ ಕನ್ನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಸಮಾಜದಲ್ಲಿ ಅಡಗಿರುವ ಜಾತಿ ತಾರಾತಮ್ಯ ಹೋಗಲಾಡಿಸಲು ಸಾಧ್ಯವಾಗಲಿದೆ. ಕನಕ ದಾಸರು ಚನ್ನಕೆಶವನ ದರ್ಶನಕ್ಕಾಗಿ ಬೇಲೂರಿಗೆ ಬಂದಿದ್ದರೆಂದರೆ ಅದುವೆ ನಮ್ಮ ಪುಣ್ಯ. ಮತ್ತು ಬೇಲೂರಿನಲ್ಲಿ ಹೊಸದಾಗಿ ಹಾಸನ ರಸ್ತೆಯಲ್ಲಿ ನಿರ್ಮಾಣವಾಗಲಿರುವ ಸೇತುವೆ ಸಮೀಪ ವೃತ್ತ ನಿರ್ಮಿಸಿ ಅಲ್ಲಿಗೆ ಕನಕ ದಾಸ ವೃತ್ತ ಎಂದು ಹೆಸರಿಟ್ಟು ಅವರ ಪ್ರತಿಮೆ ನಿರ್ಮಿಸಲು ಮುಂದಾಗಲಿದ್ದೇವೆ ಎಂದರು.
ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ ಮಾತನಾಡಿ, ಬುದ್ಧ, ಬಸವಣ್ಣನವರು ಹೇಗೆ ಸಮಾಜದಲ್ಲಿನ ಅಂಕು ಡೊಂಕುಗಳನ್ನು ನಿವಾರಿಸಿ ಸಮಾ ಸಮಾಜಕ್ಕೆ ಮುಂದಾದರೂ ಅದೇ ರೀತಿ ಕನಕ ದಾಸರು ಸಹ ತಮ್ಮ ಕೀರ್ತನೆಗಳ ಮೂಲಕ ಸಮಾಜ ತಿದ್ದುವುದಕ್ಕೆ ಮುಂದಾದರು. ಈ ಮಹಾನ್ ನಾಯಕರ ಮಾರ್ಗದಲ್ಲಿ ಡಾ.ಅಂಬೇಡ್ಕರ್‌ರವರು ಸಾಗಿದ್ದು ಗಮನಿಸಬೇಕಿದೆ. ಇಂತಹ ಮಹಾನೀಯರ ಆದರ್ಶಗಳನ್ನು ಎಲ್ಲರು ತಿಳಿದು ಜಾತಿಯ ಬೇರು ಕಿತ್ತೊಗೆಯಲು ಮುಂದಾಗೋಣ ಎಂದರು.
ಕನಕ ದಾಸರ 535ನೇ ಜಯಂತೋತ್ಸವದ ದಿವ್ಯ ಸಾನಿಧ್ಯ ವಹಿಸಿ ಕೆಆರ್ ನಗರದ ಕನಕ ಗುರು ಪೀಠ ಶಾಖಾ ಮಠದ ಶ್ರೀಶಿವಾನಂದ ಪುರಿ ಸ್ವಾಮೀಜಿ ಮಾತನಾಡಿದರು.
ಮಾಜಿ ವಿಧಾನಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷೆ ಹೇಮಾವತಿ ಮಂಜುನಾಥ್. ಕನಕ ಉತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷ ಬಿ.ಎಲ್.ರಂಗನಾಥ್, ಕಾರ್ಯಾಧ್ಯಕ್ಷ ಬಿ.ಎಂ.ಸಂತೋಷ್, ಜಿಪಂ ಮಾಜಿ ಸದಸ್ಯರಾದ ವೈ.ಎನ್.ಕೃಷ್ಣೇಗೌಡ, ಪಟೇಲ್ ಶಿವಪ್ಪ, ಬಿಜೆಪಿ ಜಿಲ್ಲಾ ಉಪಾರ್ಧಯಕ್ಷ ಕೊರಟಿಕೆರೆ ಪ್ರಕಾಶ್, ಉದ್ಯಮಿ ಗ್ರಾನೈಟ್ ರಾಜಶೇಖರ್, ಕೆಪಿಸಿಸಿ ಹಿಂದುಳಿದ ವರ್ಗದ ಕಾರ್ಯದರ್ಶಿ ಈ.ಹೆಚ್.ಲಕ್ಷ್ಮಣ್, ಕೆಪಿಸಿಸಿ ಸದಸ್ಯ ಬಿ.ಎಲ್.ಧರ್ಮೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್, ಪುರಸಭೆ ಉಪಾಧ್ಯಕ್ಷೆ ಉಷಾ ಸತೀಶ್, ಸದಸ್ಯೆ ಮಣಿಶೇಖರ್ ಸೇರಿದಂತೆ ಇತರರಿದ್ದರು.