

ಕೊಟ್ಟೂರು: ದಾರ್ಶನಿಕರು, ಶರಣರು, ಸಮಾಜ ಸೇವಕರ ಜಯಂತಿಗಳು ಸಮಾಜದಲ್ಲಿ ಜಾತಿ ನಿರ್ಮೂಲನೆ ಮಾಡುವುದಕ್ಕಿಂತ ಜಾತೀಯತೆಯನ್ನು ಹೆಚ್ಚು ಮಾಡುತ್ತಿವೆ. ಇದು ಸಮಾಜಕ್ಕೆ ಮಾರಕವಾಗಿದೆ. ಪ್ರತಿ ಜಯಂತಿಯೂ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸುತ್ತಿವೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಸಮ ಸಮಾಜ ನಿರ್ಮಾಣ, ಜಾತಿ ನಿರ್ಮೂಲನೆ, ಮೂಢನಂಬಿಕೆ ತೊಡೆದು ಹಾಕಲು ಶ್ರಮಿಸಿದ ದಾರ್ಶನಿಕರು, ಶರಣರು ಜಾತಿಗಳಿಗೆ ಸೀಮಿತರಾಗಿದ್ದಾರೆ. ಅಂಬೇಡ್ಕರ್ ಜಯಂತಿಯನ್ನು ಬ್ರಾಹ್ಮಣರು, ಕನಕದಾಸರ ಜಯಂತಿಯನ್ನು ಲಿಂಗಾಯತರು, ಲಿಂಗಾಯತ ಶರಣರ ಜಯಂತಿಯನ್ನು ದಲಿತರು ಆಚರಿಸಿದಾಗ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳು 100ಕ್ಕೂ ಹೆಚ್ಚು ದೇಶದಲ್ಲಿವೆ. ವಿಶ್ವ ಸಂಸ್ಥೆಯಲ್ಲಿ ಭಾವಚಿತ್ರವಿದೆ. ಅಂಬೇಡ್ಕರ್ ದಲಿತರ ಪರವಾಗಿ ಮಾತ್ರ ಹೋರಾಟ ಮಾಡಿಲ್ಲ. ಸಂವಿಧಾನದ ಕಾರಣಕ್ಕಾಗಿಯೇ ನರೇಂದ್ರ ಮೋದಿ ಪ್ರಧಾನಿ, ಅಮಿತ್ ಷಾ ಗೃಹಮಂತ್ರಿಯಾಗಿದ್ದಾರೆ. ಇಂತಹ ಮಹಾತ್ಮ ಬರೆದ ಸಂವಿಧಾನವನ್ನು ಸರ್ಕಾರ ಬದಲಿಸಲು ಯತ್ನಿಸುತ್ತಿರುವುದು ಮತ್ತು ಅವರ ಪ್ರತಿಮೆಗಳನ್ನು ಕಬ್ಬಿಣದ ಸರಳುಗಳಿಂದ ರಕ್ಷಿಸುತ್ತಿರುವುದು ವಿಷಾದದ ಸಂಗತಿ ಎಂದು ಕುಂ.ವೀರಭದ್ರಪ್ಪ ತಿಳಿಸಿದರು.
ದಲಿತ ಪ್ರಮುಖರಾದ ತಗ್ಗಿನಕೆರೆ ಕೊಟ್ರೇಶ, ಮರಿಸ್ವಾಮಿ, ರಾಮು, ಜಯಪ್ರಕಾಶ, ತಾಪಂ ಇಒ ಅಮರೇಶ, ತಹಸೀಲ್ದಾರ್ ಅಮರೇಶ, ಪಪಂ ಉಪಾಧ್ಯಕ್ಷ ಸಿದ್ದಯ್ಯ, ಅಧ್ಯಕ್ಷೆ ಬದ್ದಿ ರೇಖಾ, ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ಶಿಂಧೆ, ನೂರುಲ್ಲಾ ಖಾನ್, ಪಪಂ ಸದಸ್ಯ ಕೆಂಗರಾಜ್ ಇತರರಿದ್ದರು.