ಜಾತಿಗಳ ನಡುವೆ ಸಂಘರ್ಷ ಸಲ್ಲ, ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ ಆನೇಕಲ್ ನಲ್ಲಿ ರಾಜಮುಡಿ ಉತ್ಸವ

3
Published on

ಆನೇಕಲ್: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ತುಂಬಾ ನೋವು ತರಿಸಿದೆ. ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕಬೇಕು ಎಂದು ಮೈಸೂರಿನ ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನುಡಿದರು.

ಪಟ್ಟಣದ ಶ್ರೀ ತಿಮ್ಮರಾಯ ಸ್ವಾಮಿ ದೇವಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಜಮುಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತಿಗಳ ನಡುವೆ ಸಂಘರ್ಷ ನಡೆಯಬಾರದು.ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಇದೇ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.

ಆನೇಕಲ್ ಹಾಗೂ ಮೈಸೂರಿಗೆ ಈ ಹಿಂದೆ ಉತ್ತಮ ಸಂಬಂಧ ಇತ್ತು. ಆದ್ದರಿಂದ ರಾಜಮುಡಿ ಉತ್ಸವದಲ್ಲಿ ಸಂತಸದಿಂದ ಪಾಲ್ಗೊಂಡಿದ್ದೇನೆ ಎಂದರು.

ದೇವಾಲಯದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಮಾತನಾಡಿ, ದೇವಾಲಯ ಪುರಾಣ ಪ್ರಸಿದ್ಧವಾಗಿದ್ದು, ಮೊದಲ ಬಾರಿಗೆ ರಾಜಮುಡಿ ಉತ್ಸವ ಆಯೋಜಿಸಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದರು.

ಆಧ್ಯಾತ್ಮಿಕ ಚಿಂತಕ ಕೆ.ವಿ ಲಕ್ಷ್ಮೀನಾರಾಯಣ ಆಚಾರ್ಯ ಮಾತನಾಡಿ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ರಾಜಮುಡಿ ಕಿರೀಟವನ್ನು ರಾಜ ಒಡೆಯರ್ ಕೊಡುಗೆ ಕೊಟ್ಟಿದ್ದರು. ಅವರು ಪ್ರತಿ ವರ್ಷವೂ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದರು.

ಮೇಲುಕೋಟೆಯಲ್ಲಿನ ರಾಜಮುಡಿ ಉತ್ಸವವನ್ನು ಆನೇಕಲ್‌ನ ತಿಮ್ಮರಾಯಸ್ವಾಮಿ ದೇವಾಲಯದಲ್ಲೂ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಮೈಸೂರು ಮಹಾರಾಜರಿಗೆ ಆಹ್ವಾನ ನೀಡಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ಸವಕ್ಕೆ ಚಾಲನೆ ನೀಡಿದ್ದು ಎಲ್ಲರಲ್ಲೂ ಸಂತಸ ತಂದಿದೆ ಎಂದರು.

ರಾಜಮುಡಿ ಉತ್ಸವದ ಸೇವಾಕರ್ತರಾದ ವೆಂಕಟರಾಜು ಪಂಡರಿ ಮಾಸ್ಟರ್ ಕುಟುಂಬ, ಚೆನ್ನರಾಜು ಕುಟುಂಬ, ಬೈರ ರಾಜಕುಟುಂಬದವರು, ಪುರಸಭೆ ಸದಸ್ಯರಾದ ಪವಿತ್ರಾ ರಘು, ಶಂಕರ್ ಕುಮಾರ್,ಕೀರ್ತಿ, ರಘು ಇತರರು ಭಾಗವಹಿಸಿದ್ದರು.

ಒಡೆಯರ್ ನೋಡಲು ನೂಕುನುಗ್ಗಲು: ಉತ್ಸವದಲ್ಲಿ ಪಾಲ್ಗೊಂಡಿದ್ದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನೋಡಲು ಸಾವಿರಾರು ಭಕ್ತರು ಮುಗಿಬಿದ್ದರು. ಕೆಲವರು ೆಟೋ ತೆಗೆದುಕೊಂಡು ಸಂತಸ ಪಟ್ಟರು.

ಅದ್ದೂರಿ ಮೆರವಣಿಗೆ: ಉತ್ಸವದ ಅಂಗವಾಗಿ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಾಲಯದ ಮಾದರಿಯಲ್ಲಿ ರಾಜ ಮುಡಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಆವರಣದಲ್ಲಿ ನೂರಾರು ಜನ ಭಕ್ತರು ಮೂರ್ತಿಯನ್ನು ಹೊತ್ತು ಮೆರವಣಿಗೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net