

ಚಾಮರಾಜನಗರ: ಪ್ರಸ್ತುತ ನಡೆಯುತ್ತಿರುವ ಜಾತಿಜನಗಣತಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು ಹೊಲಯ ಎಂದು ನಮೂದಿಸಿ ಎಂದು ಸಮುದಾಯದ ಮುಖಂಡ ಮಹೇಶ್ ಕುದರ್ ಮನವಿ ಮಾಡಿದರು.
ತಾಲೂಕಿನ ಭೋಗಾಪುರ, ಸಪ್ಪಯ್ಯನಪುರ, ಕಲ್ಲಹಳ್ಲಿ, ಕೆಲ್ಲಂಬಳ್ಳಿ, ಮರಿಯಾಲ, ಮರಿಯಾಲದಹುಂಡಿ, ಶಿವಪುರ, ಯಡಪುರ, ಉತುವಳ್ಳಿ, ಮಲ್ಲಯ್ಯನಪುರ, ಬದನಗುಪ್ಪೆ, ಮುತ್ತಿಗೆ, ಪಣ್ಯದಹುಂಡಿ, ದೊಡ್ಡರಾಯಪೇಟೆ, ಕೂಡ್ಲೂರು,ಹಂಡ್ರಕಳ್ಳಿ ಗ್ರಾಮಗಳ ಬಲಗೈ ಸಮುದಾಯ ಬೀದಿಗಳಲ್ಲಿ ಗುರುವಾರ ಜಾಗೃತಿ ಮೂಡಿಸಿ ಮಾತನಾಡಿದರು.
ರಾಜ್ಯಾದ್ಯಂತ ಒಳಮೀಸಲಾತಿ ಸಂಬಂಧ ಸಮೀಕ್ಷೆ ಕಾರ್ಯವನ್ನು ಮೇ 25 ತನಕ ಅವಕಾಶ ಮಾಡಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಶೇ.40 ರಷ್ಟು ಮಾತ್ರ ಸಮೀಕ್ಷೆ ಕಾರ್ಯ ನಡೆದಿದೆ. ಇನ್ನೂ ಉಳಿದ ದಿನಗಳಲ್ಲಿ ಶೇ.100 ರಷ್ಟು ಸಮೀಕ್ಷೆ ಮುಗಿಯಬೇಕಾಗಿದೆ. ಪರಿಶಿಷ್ಟ ಜಾತಿಯ ಆದಿ ಕರ್ನಾಟಕದವರು ಹೊಲಯ ಎಂದು ಬರೆಸುವ ಮೂಲಕ ನಮ್ಮ ಸಮುದಾಯದ ಮುಂದಿನ ಭವಿಷ್ಯಕ್ಕೆ ಸಹಕರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಭೋಗಾಪುರ ಮಹಾಲಿಂಗ, ಗಾಳೀಪುರ ಪುಟ್ಟಸ್ವಾಮಿ, ಕರಿನಂಜನಪುರ ಚನ್ನಪ್ಪ, ಗಡಿ ಯಜಮಾನರಾದ ನಾಗರಾಜ್, ಭೋಗಾಪುರ ಶ್ರೀಧರ್ ಹಾಗೂ ಇತರರು ಹಾಜರಿದ್ದರು.