

ದಾವಣಗೆರೆ : ರಾಜ್ಯ ಸರ್ಕಾರ ಸದ್ಯದಲ್ಲೇ ನಡೆಸಲಿರುವ ಜಾತಿಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಮನವಿ ಮಾಡಿದರು. ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖಂಡರು, ಬೆಂಗಳೂರಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿ, ಅದರಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು, ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎರಡರಲ್ಲಿ ಯಾವುದನ್ನಾದರೂ ನಮೂದಿಸಬಹುದು. ನಂತರದಲ್ಲಿ ಉಪಜಾತಿಗಳನ್ನು ಬರೆಸಬೇಕು ಎಂದು ಹೇಳಿದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಸಮಾಜದವರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ. ಮಹಾಸಭಾ ದೊಡ್ಡ ಹೆಜ್ಜೆಯನ್ನಿಟ್ಟಿದೆ, ನಾವು ಅದಕ್ಕೆ ಸಹಕಾರ ನೀಡೋಣ. ಈ ಸಂದೇಶ ಮನೆ ಮನೆಗೂ ತಲುಪಬೇಕು ಎಂದು ತಿಳಿಸಿದರು. ಬಸವ ಸಂಸ್ಕೃತಿ ಅಭಿಯಾನ ರಾಜ್ಯಾದ್ಯಂತ ಸಂಚರಿಸುತ್ತಿದೆ. ಸೆ. 15 ರಂದು ದಾವಣಗೆರೆಗೆ ಆಗಮಿಸಲಿದ್ದು ಅಂದು ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಹಾಸಭಾದ ರಾಜ್ಯ ಕಾರ್ಯದರ್ಶಿ ಶಶಿಕಲಾ ಮಾತನಾಡಿ, ಜಾತಿಗಣತಿ ವಿಷಯವಾಗಿ ಗೊಂದಲ, ವಿಮರ್ಶೆ, ಆರೋಪಗಳು ವ್ಯಕ್ತವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸಂದೇಶಗಳು ಅಧಿಕೃತವಲ್ಲ. ಮಹಾಸಭಾ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದರು. ಮಹಾಸಭಾದಿಂದ ಬೆಂಗಳೂರಿನಲ್ಲಿ ಶೀಘ್ರವೇ ಇನ್ನೊಂದು ಸಭೆ ನಡೆಯಲಿದೆ. ಈ ವಿಷಯವಾಗಿ ಜಿಲ್ಲೆ, ತಾಲೂಕುಮಟ್ಟದಲ್ಲಿ ತರಬೇತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ವಕೀಲ ಪ್ರಕಾಶ್ ಪಾಟೀಲ್ ಮಾತನಾಡಿ, ಜಾತಿಗಣತಿ ಸಂದರ್ಭದಲ್ಲಿ ಸಮೀಕ್ಷೆಗೆ ತೆರಳುವ ಅಧಿಕಾರಿಗಳ ಜತೆಗೆ ನಾವೂ ಇರಬೇಕು. ಅವರಿಂದ ಏನಾದರೂ ಲೋಪಗಳಾದರೆ ಗಮನಿಸಿ ಸರಿಪಡಿಸುವಂತೆ ಹೇಳಬೇಕು ಎಂದು ಸಲಹೆ ನೀಡಿದರು. ಡಾ. ಮಂಜುನಾಥ ಕುರ್ಕಿ ಮಾತನಾಡಿದರು. ಮಹಾಸಭಾದ ಮತ್ತೊಬ್ಬ ಉಪಾಧ್ಯಕ್ಷ ಎಸ್.ಎಸ್. ಗಣೇಶ್, ಹಿರಿಯ ಮುಖಂಡ ಎಸ್.ಕೆ ವೀರಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್, ರಾಜ್ಯ ಕಾರ್ಯದರ್ಶಿ ಸಂದೀಪ್ ಅಣಬೇರು ಇದ್ದರು. ನಿರ್ಮಲಾ ಸುಭಾಷ್ ಸ್ವಾಗತಿಸಿದರು.