

ಮೈಸೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ (ಜಾತಿಗಣತಿ) ವರದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ ಜು. 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೋರಿಕೆ ಮುಂದಿಡಲಾಗುವುದು ಎಂದು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ರಿಟಿಷ್ ಸರ್ಕಾರ ಹೊರತುಪಡಿಸಿದರೆ, ನಂತರ ಯಾವುದೇ ಜಾತಿ ಜನಗಣತಿ ರಾಜ್ಯದಲ್ಲಿ ನಡೆದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರ ಆಡಳಿತದಲ್ಲಿ 170 ಕೋಟಿ ರೂ. ವೆಚ್ಚ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಆದರೆ, ಅದು ನಂತರ ಬಿಡುಗಡೆಯಾಗಿಲ್ಲ. ಈ ವರದಿ ಬಿಡುಗಡೆಯಾದರೆ ಹಿಂದುಳಿದ ವರ್ಗಗಳು ಹಾಗೂ ಇನ್ನಿತರ ಸಮುದಾಯಗಳ ಜನರಿಗೆ ಅನುಕೂಲವಾಗಲಿದೆ ಎಂದರು.
ವರದಿ ಬಿಡುಗಡೆಗೆ ಮುನ್ನವೇ ಕೆಲವು ಸ್ವಾಮೀಜಿಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ವರದಿ ಬಿಡುಗಡೆಯಿಂದ ಸಾಮಾಜಿಕ ನ್ಯಾಯ ಸಾಧ್ಯವಾಗಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದರನ್ನು ಸಹಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಆಗುತ್ತಿಲ್ಲ, ಬಿಜೆಪಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ, ಸಿಎಂ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪಿತೂರಿ ಮಾಡಿದ್ದು, ಇದರಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದರು.
ಎಚ್.ಡಿ ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಇರಿಸಿಕೊಂಡು ಬೆದರಿಕೆ ರಾಜಕಾರಣ ಮಾಡಬಾರದು. ಇದು ಅವರ ಘನತೆಗೆ ತಕ್ಕುದಲ್ಲ. ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಷ್ಟೇ ಆಗಿದ್ದರೂ ಒಳ್ಳೆಯ ಯೋಜನೆ ನೀಡುತ್ತಿದೆ. ಹೀಗಾಗಿ ಅದರ ಪಾಡಿಗೆ ಅದು ಕೆಲಸ ಮಾಡಲು ಬಿಡಬೇಕು ಎಂದು ಮನವಿ ಮಾಡಿದರು.